ಎಲ್ಲಿ ಜಾರಿತೋ….
ಇದು, ಗೆಳೆಯ ಸುವ್ಯಕ್ತನ ಬರಹ ಸಂಗ್ರಹದಿಂದ ಕದ್ದಿದ್ದು. ನನಗೇನೋ ಖುಷಿ ಕೊಟ್ಟಿತು. ಅದಕ್ಕೇ ಈಗ ನಿಮ್ಮೆದುರಿಡುತ್ತಿದ್ದೇನೆ. ಓದಿ, ನೀವೂ ಖುಷಿ ಪಡಿ. ಅಂದಹಾಗೆ, ಈ ಬರಹದಲ್ಲಿನ ವಿಷಯ ಸಂಭ್ರಮಿಸುವಂತದ್ದಲ್ಲ ಮತ್ತೆ! ನಾನು ಹೇಳಿದ್ದು ಬರಹದ ಶೈಲಿಯ ಬಗ್ಗೆ. ಅದರೊಳಗಿನ ಹೂರಣ, ನಾವೆಲ್ಲರೂ ಒಮ್ಮೆ ಯೋಚಿಸುವಂತೆ ಮಾಡುತ್ತದೆ. ನಾವು ಹಾಗೆ ಯೋಚಿಸಿದಾಗಲೇ ಅದಕ್ಕೂ ಸಾರ್ಥಕತೆ. ಅಲ್ಲವೇ?
ಎಲ್ಲಿ ಜಾರಿತೋ….
ಸಿಡಿಲಿಗೆ ಕಂಗಾಲಾದ ಹೊಂಬಾಳೆಯಂತಿದ್ದಳು ಅವಳು…..
ಕೋಮಲಾಂಗಿ ಅನ್ನುವುದರ ಕಲ್ಪನೆ ನನ್ನಲ್ಲಿ ಮೂಡಿದ್ದೇ ಅವಳನ್ನು ಕಂಡ ಮೇಲೆ. ಆಗ ಅವಳು ಅಷ್ಟು ಪ್ರಸಿದ್ಧಳಾಗಿರಲಿಲ್ಲ. ನನಗಿನ್ನು ಸರಿಯಾಗಿ ಮೀಸೆ ಮೂಡಿರಲಿಲ್ಲ. ಟಿ.ವಿ ಟ್ರೈಲರ್ನಲ್ಲಿ ಅವಳ ಹೆಸರು ನೋಡಿದೆ. ಆ ಸಿನಿಮಾ ಬಂದದ್ದೂ ಗೊತ್ತಿಲ್ಲ ಹೋಗಿದ್ದೂ ಗೊತ್ತಿಲ್ಲ. ಅದು ಯಾವ ಸಿನಿಮಾದ ಟ್ರೈಲರ್ ಅನ್ನುವುದೂ ನೆನಪಿಲ್ಲ. ಯಾರೂ ಕ್ಯಾರೇ ಎನ್ನದ ಅವಳು, ನನ್ನ ಕನಸಿನಕನ್ಯೆ. ನೋಡೋಣವೆಂದರೆ ಪೇಪರಿನಲ್ಲಿ ಅವಳ ಫೋಟೋ ಕೂಡ ಹೆಚ್ಚಾಗಿ ಸಿಗುತ್ತಿರಲಿಲ್ಲ.
ಆಕೆಯನ್ನು ಮೊದಲ ಬಾರಿ ಕಂಡ, ಕಂಡು ಬಾಯಿ ತೆರೆದುಕೊಂಡು ಕಲ್ಲಾಗಿ ನಿಂತ ಆ ಕ್ಷಣದ ಚಿತ್ರ, ಸ್ಮರಣೆಯಲ್ಲಿ ಎಲ್ಲಾ ಬಣ್ಣಗಳ ಜೊತೆಯಲ್ಲಿ ಅಚ್ಚಾಗಿ ಉಳಿದಿದೆ. ಮುದ್ದು ಮುಖ, ಮುಗ್ಧ ಕಂಗಳು, ಗುಲಾಬಿ ಎಸಳಿನ ತುಟಿಗಳು, ನೇರ ತೀಡಿದ ಮೂಗು, ಹಾಲಿಗಿಂತಲೂ ಬಿಳುಪಾದ, ರೇಶಿಮೆಗಿಂತಲೂ ನುಣುಪಾದ ದೇಹ. ಕಡುಗೆಂಪು ಗುಲಾಬಿ ಬಣ್ಣದ ಸೀರೆ. ಸೀರೆಯ ಮರೆಯಲ್ಲಿ ಬರೀ ಗುಲಾಬಿ ಮೊಗ್ಗುಗಳೇ ಕೂಡಿಕೊಂಡು ಹೆಣೆದ ಲೋಕವನ್ನೇ ಕಂಗಾಲುಗೊಳಿಸಬಲ್ಲ ಹರೆಯ. ಮೊದಲೇ ಹೇಳಿದಂತೆ, ನನ್ನಲ್ಲಿ ಕೋಮಲಾಂಗಿ ಎನ್ನುವ ಕಲ್ಪನೆ/ಶಬ್ದ/ಅರ್ಥ ರೂಪುಗೊಂಡು, ಅದು ಇವಳೇ ಸರಿ ಅಂತ ಅನಿಸಿದ ಗಳಿಗೆ ಅದು. ನನಗೆ ನಯಾ ಪೈಸೆಯ ಲಾಭ ಇರದಿದ್ದರೂ ಇಷ್ಟು ಮುದ್ದಾದ ಮುಖದ ಇವಳನ್ನು ಅವಕಾಶ, ಅದೃಷ್ಟ, ಗೆಲುವು ಅರಸಿ ಬರಲಿ; ಇನ್ನಷ್ಟು ಮಿಂಚಲಿ ಅಂತ ಆಸೆ ಪಟ್ಟಿದ್ದೆ. ಅವಳ ಸಿನಿಮಾಗಳು ಹಿಟ್ ಆಗಲಿಲ್ಲ.
ಯಾಕೋ ಗೊತ್ತಿಲ್ಲ, ಮೊನ್ನೆ ಪೇಪರಿನಲ್ಲಿ ಅವಳ ಕಂಗಳನ್ನು ಕಂಡ ಮೇಲೆ ಏನೋ ಒಂದು ರೀತಿಯ ಚಡಪಡಿಕೆ. ದೇಶದ್ರೋಹಿಗಳೊಡನೆ ದೇಶ ಬಿಟ್ಟು ಓಡಿಹೋದವಳು, ಇಂತವರಿಗೆಲ್ಲ ಏನ್ರೀ ಅನುಕಂಪ. ಸಿಕ್ಕಾಪಟ್ಟೆ ದುಡ್ಡಿರುತ್ತೆ. ಈಗ ಇನ್ನೊಂದಿಷ್ಟು ಹೆಸರು ಬಂದಿದೆ. ಸೀರಿಯಲ್ಲು, ಬ್ಯೂಟಿ ಪಾರ್ಲರ್, ಅದೂ ಇದೂ ಅಂತ ಇನ್ನಷ್ಟು ಮೆರೀತಾರೆ. ಅವರಿಗೇನು ಪಶ್ಚಾತ್ತಾಪ ಇರುತ್ತೆ ಅಂದ್ಕೊಂಡಿದೀರಾ? - ಅಂತ ನಿಮ್ಮಂತೆ ನನಗೂ ಸಿಟ್ಟು ಬರುತ್ತದೆ. ಆದರೆ, ಅವತ್ತೇಕೋ ಅವಳ ಮುಖದಲ್ಲಿ ದೈನ್ಯತೆ ಇತ್ತು. ತಪ್ಪು ಮಾಡಿಬಿಟ್ಟೆ ಅನ್ನುವ ಭಾವವಿತ್ತು. ಹೀಗೆಲ್ಲ ಭಾವಿಸುವಂತೆ ನನ್ನೆದೆಯಲ್ಲಿ ಪ್ರೀತಿಯಿತ್ತು. ಯಾಕೋ, ‘ಸಾಯ್ಲಿ ಮುಂಡೆವು’ ಅಂತ ಮರೆಯುವುದಕ್ಕೆ ಸಾಧ್ಯವಾಗುತ್ತಿಲ್ಲ.
ಅವಳು ನನ್ನ ಪ್ರೀತಿಯ ಹೊಂಬಾಳೆ- ಮೋನಿಕಾ ಬೇಡಿ!.

ಆ ನಟಿ ಆತ್ಮಹತ್ಗೆ ಪ್ರಯತ್ನಿಸಿದಳು, ಮತ್ತೊಬ್ಬಳು ಭೂಗತಳಾದಳು, ಇವಳಂತೂ ತೀರ ಕಾಲ್ ಗರ್ಲ್ ಆಗಿಹೋದಳು…ಈ ಸುದ್ದಿಗಳನ್ನೆಲ್ಲ ಕೇಳಿದಾಗ ನಿಮಗೇನನಿಸುತ್ತೋ ಗೊತ್ತಿಲ್ಲ. ನನಗಂತು ಕರುಳು ಹಿಂಡಿದ ಹಾಗಾಗುತ್ತೆ.
ಈ ಮುದ್ದಾದ ಹುಡುಗಿಯರಿಗೆಲ್ಲ ಅದೇನು ರೋಗ ಬಂದಿರುತ್ತೋ ಗೊತ್ತಿಲ್ಲ. ಸುಮಾರು ಎರಡು ವರ್ಷದ ಹಿಂದೆ ನಮ್ಮೂರಿನಲ್ಲೂ ಹೀಗೇ ಆಗಿತ್ತು. ಇಡೀ ಊರಿನಲ್ಲಿ ಹಾರ್ಟ್ ಆಪರೇಶನ್ ಮಾಡಬಲ್ಲ ಏಕೈಕ ಡಾಕ್ಟರ್ ಶಾರದಾಪ್ರಸದ್. ಅವರ ಮುದ್ದಿನ ಮಗಳು ಮುದ್ದಾದ ಪ್ರಾರ್ಥನಾ ಕಣ್ಮರೆಯಾದಳು. ಆಟೋ ಡ್ರೈವರ್ ಶಿವನ ಜೊತೆ ಓಡಿಹೋಗಿದ್ದಾಳೆ ಅಂತ ನನಗೂ ಅವರಿವರಿಂದ ಕೇಳಿ ಗೊತ್ತು. ಓಡಿಹೋಗಿದ್ದನ್ನು ನಾನೇನು ಕಣ್ಣಾರೆ ನೋಡಿರಲಿಲ್ಲ ಎನ್ನಿ. ಆದರೂ, ಊರಿನವರ ಮಾತಿನಲ್ಲಿ ನಂಬಿಕೆ ಇಟ್ಟು ಈ ಗುಟ್ಟನ್ನು ನಿಮಗೆ ಹೇಳುತ್ತಿದ್ದೇನೆ.
ಪ್ರಾರ್ಥನ ನಮ್ಮ ಮನೆ ರಸ್ತೆಯಲ್ಲಿ ತಲೆ ಬಗ್ಗಿಸಿಕೊಂಡು ನಡೆದು ಕಾಲೇಜಿಗೆ ಹೋಗುವಾಗ ಅಕ್ಕಪಕ್ಕ ಮನೆಯವರು ಯಾರೂ ಇಲ್ಲದಾಗ ಅವಳನ್ನು ಕಣ್ತುಂಬ ನೋಡುತ್ತಿದ್ದೆ. ಅವಳು ಆಟೋ ಶಿವನೊಂದಿಗೆ ಓಡಿಹೋದಳು ಅನ್ನುವುದನ್ನು ಕೇಳಿ ನನಗೆ ಮೈಯೆಲ್ಲ ಉರಿದುಹೋಗಿತ್ತು. ಓಡಿಹೋಗಿ ಎರಡು ತಿಂಗಳ ನಂತರ ಅವಳು ಹಿಂದಿರುಗಿ ಬಂದದ್ದು ಊರವರಿಗೆಲ್ಲ ಮತ್ತೂ ದೊಡ್ಡ ಸುದ್ದಿ. ನಮ್ಮ ಮನೆಯಲ್ಲು ಆ ವಿಚಾರ ಎತ್ತುತ್ತಿದ್ದರು. ಆಗೆಲ್ಲ ನಾನು ‘ಆ ತಲೆಬಿಸಿ ನಮಗ್ಯಾಕೆ?’ ಅಂತ ಜೋರಿನಲ್ಲಿ ಹೇಳಿ ಅಲ್ಲಿಗೇ ನಿಲ್ಲಿಸುತ್ತಿದ್ದೆ. ರಾಘವೇಂದ್ರನ ಟೀ ಅಂಗಡಿಯಲ್ಲಿ, ರಫೀಕನ ಸೈಕಲ್ ಶಾಪಿನಲ್ಲಿ, ದಿನಸಿ ಅಂಗಡಿ ದಿನೇಶನ ಬಾಯಲ್ಲಿ, ಎಲ್ಲರ ಬಾಯಲ್ಲೂ ಅವಳ ಬಗ್ಗೆಯೇ ಮಾತು. ಓಡಿಸಿಕೊಂಡು ಹೋದ ಆ ಪುಣ್ಯಾತ್ಮ ಶಿವ ಈಗ ಯಾವ ಕೈಲಾಸದಲ್ಲಿದ್ದಾನೋ ಯಾರಿಗೂ ಗೊತ್ತಿಲ್ಲ (ಅವನು ಅವಳನ್ನು ಓಡಿಸಿಕೊಂಡು ಹೋದನೋ, ಅವಳು ಅವನನ್ನು ಓಡಿಕೊಂಡು ಹೋದಳೋ, ಇಬ್ಬರೂ ಒಬ್ಬರನ್ನೊಬ್ಬರು ಓಡಿಸಿಕೊಂಡು ಹೋದರೋ…..ಸರಿಯಾದ ಮಾಹಿತಿ ಇಲ್ಲ) . ಅವನ ವಿಷಯ ನೆನಪಾದಾಗ ಪ್ರಾರ್ಥನಳ ವಿಷಯ ಬಂದಾಗೆಲ್ಲ ಎಲ್ಲರಲ್ಲೂ ಅವನ ಬಗ್ಗೆ ಮೂಡುತ್ತಿದ್ದ ಏಕಾಭಿಪ್ರಾಯ ಎಂದರೆ- ‘ಒಳ್ಳೆ ಮಜಾ ಮಾಡ್ದ ಬಡ್ಡೀಮಗ…’. ಇನ್ನು ಅವಳ ಬಗ್ಗೆ- ‘ಓಡಿ ಹೋದ್ಳಲ್ಲ, ಆಗ ಜ್ಞಾನ ಇರ್ಲಿಲ್ವಾ? ……ಉಪ್ಪು ತಿಂದ ಮೇಲೆ….ಹಾಂಗೆ ಆಗ್ಬೇಕು….’. ಈ ಮಾತುಗಳಿಗೆಲ್ಲ ನನ್ನಲ್ಲೊಂದು ತಿರಸ್ಕಾರ ಬೆಳೆದಿತ್ತು.
ಮೊದಲೇ ತಲೆ ಬಗ್ಗಿಸಿಕೊಂಡು ನಡೆಯುತ್ತಿದ್ದ ಹುಡುಗಿ ಅವಳು. ಇಷ್ಟೆಲ್ಲ ಆದಮೇಲೆ ಊರಿನವರ ಮುಂದೆ ತಲೆ ಎತ್ತಿದ್ದೇ ಇಲ್ಲ. ಆಮೇಲೆ ಕಾಲೇಜಿಗೂ ಹೋಗಲಿಲ್ಲ. ಮನೆಯಿಂದ ಹೊರಗೂ ಹೆಚ್ಚಾಗಿ ಬರುತ್ತಿರಲಿಲ್ಲ. ಆಟೋ ಶಿವ ಅವಳನ್ನು ಬಳಸಿಕೊಂಡಿರಬಹುದು, ಊರಿನವರು ಹೇಳುವಂತೆ ಮಜಾ ಕೂಡ ಮಾಡಿರಬಹುದು, ಇದ್ದಕ್ಕಿದ್ದಂತೆ ಕಾಣೆಯಾಗಿ ಅವಳೊಬ್ಬಳನ್ನೇ ಬಿಟ್ಟುಹೋಗಿ ಬಹಳ ಕೀಳಾಗಿ ನಡೆಸಿಕೊಂಡಿರಬಹುದು. ಆದರೆ, ಆ ಚೌತಿ ಹಬ್ಬದಂದು ಗಣಪತಿ ದೇವಸ್ಥಾನಕ್ಕೆ ಅವಳು ಬಂದಾಗ, ಹುಡುಗರು ಮೈಯನ್ನೆಲ್ಲ ಕಣ್ಣು ಮಾಡಿಕೊಂಡು ಅವಳನ್ನು ನಿಜವಾಗಿಯೂ ಸಾರ್ವಜನಿಕವಾಗಿ ಸಾಮೂಹಿಕ ಬಲಾತ್ಕಾರ ಮಾಡಿಬಿಟ್ಟರು. ಇವರ ಜೊತೆ ಏನಾದರು ಅವಳು ಓಡಿಹೋಗಿದ್ದರೆ ಆಟೋ ಶಿವನಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದರೋ ಏನೋ!.
ಹೀಗೆ ಊರಿಗೊಂದು ಕತೆಯಾಗಿದ್ದ ಪ್ರಾರ್ಥನಳಿಗೆ ಮದುವೆ ಆಯ್ತು ಅಂತ ಹೋದ ವರ್ಷ ಕೇಳಿದೆ. ಮುಂಬೈ ಕಡೆಯ ಹುಡುಗನಂತೆ. ಸಂಬಂಧಿಕನಲ್ಲ, ಪರಿಚಯಸ್ಥನೂ ಅಲ್ಲ. ಡಾಕ್ಟರ್ ಶಾರದಾಪ್ರಸಾದರ ಯಾರೋ ಮುಂಬೈ ಡಾಕ್ಟರ್ ಗೆಳೆಯನ ಮೂಲಕ ಇತ್ಯರ್ಥವಾದ ಸಂಬಂಧ. ಮದುವೆಯನ್ನೂ ಮುಂಬೈನಲ್ಲೇ ಮಾಡಿದರಂತೆ. ನಮ್ಮೂರಿನ ಯಾರಿಗೂ ಹೇಳಿಕೆ ಬರಲಿಲ್ಲ. ತೀರ ಹತ್ತಿರದ ಸಂಬಂಧಿಕರನ್ನು ಮಾತ್ರ ಕರೆದಿದ್ದರಂತೆ. ಮದುವೆ ಮುಗಿದು ಮಗಳನ್ನು ಬಿಟ್ಟು ಬರುವವರೆಗೆ ಸಂಬಂಧಿಕರಿಗೆ ಹುಡುಗನೊಟ್ಟಿಗೆ ಹೆಚ್ಚಿಗೆ ಮಾತಾಡುವ ಅವಕಾಶ ಸಿಗದಂತೆ ಕಾಯುತ್ತಿದ್ದರಂತೆ. ಮನೆಯ ಒಬ್ಬರಲ್ಲ ಒಬ್ಬರು ಹುಡುಗನೊಂದಿಗೆ ಇದ್ದೇ ಇರುತ್ತಿದ್ದರಂತೆ. ಈಗ ಸುಖವಾಗಿ ಸಂಸಾರ ಮಾಡಿಕೊಂಡಿದ್ದಾರೆ. ಒಂದು ಮಗುವೂ ಆಗಿದೆ ಅಂತ ಅಮ್ಮ ಹೇಳಿದಳು. ನನಗೇನೋ ಒಂದು ರೀತಿಯ ಸಮಾಧಾನ.
ಮೋನಿಕಾ ಬೇಡಿ ಸಿನಿಮಾದಲ್ಲಿ ನಟಿಸುತ್ತಾಳಂತೆ ಎನ್ನುವ ಸುದ್ದಿ ಬಂದಿದೆ. ಏನೂ ನಡದೇ ಇಲ್ಲವೇನೋ ಅನ್ನುವ ಹಾಗಿತ್ತು ಅವಳ ನಿಲುವು. ತಾನು ಅಬು ಸಲೇಮನನ್ನು ಮದುವೆ ಆಗಿರಲಿಲ್ಲ ಅಂದಿದ್ದಾಳೆ. ಹೀಗೆ ಹೇಳಿದ ಉದ್ದೇಶ ಮುಂದೆ ಸಂಗಾತಿಯೊಬ್ಬ ಸಿಗಬಹುದೆಂಬ ನಿರೀಕ್ಷೆಯಾ? ಅವನ ಕೃತ್ಯಗಳಿಂದಾಗಿ ತನಗೆ ಬರಬಹುದಾದ ಅಪಾಯದಿಂದ ತಪ್ಪಿಸಿಕೊಳ್ಳುವ ಉಪಾಯವಾ? ನಿಕೃಷ್ಟವೆನಿಸಿದ ಸಂಬಂಧ ಒಂದರಿಂದ ಕಳಚಿಕೊಂಡಿದ್ದೀನಿ ಎನ್ನುವ ಸೂಚನೆಯಾ? ಅದೊಂದು ತಪ್ಪು ಹೆಜ್ಜೆ ಅವನೊಬ್ಬ ತಪ್ಪು ಆಯ್ಕೆ ಅಥವ ನನಗೆ ಆಯ್ಕೆ ಎಂಬುದೇ ಇರಲಿಲ್ಲವೆಂದು ಹೇಳಿ ಅವನೆದುರು ಹಾರಿಸಿದ ಧಿಕ್ಕಾರದ ಭಾವುಟವಾ?
ಏನೋ….ಅವರಿವರು ಹೇಳಿದ್ದನ್ನೆಲ್ಲ ಕೇಳಿ ಹಾಗೇ ಹೀಗೇ ಅಂತ ಮಾತಾಡುವುದಷ್ಟೆ ನಾವು-ನೀವು. ನಮ್ಮ ಮಾತಿನ ಬಲೆಯಲ್ಲೇ ನರಳದೆ, ಗಿಡುಗನ ಕೈಗೆ ಸಿಕ್ಕಿ ನಲುಗಿದ ಗುಬ್ಬಚ್ಚಿಗಳೆಲ್ಲ ಅವರವರ ಗೂಡು ಸೇರಿಕೊಳ್ಳಲಿ. ಗಿಡುಗನಂತಹ ಹೆಣ್ಣನ್ನು ನೀವು ಕಂಡಿದ್ದೀರಾ? ನಾನಂತೂ ಕಂಡಿಲ್ಲ. ಇದ್ದರೆ, ಹಾಳಾಗಿಹೋಗಲಿ ಬಿಡಿ.