-ಸುವ್ಯಕ್ತ
ಜೋಗೀ…….ನಾ ನಾ…..ಜಾನಕೀ…..!!
ಜಾನಕಿ ಅನ್ನೋ ಮೂರಕ್ಷರದ ಹೆಸರು ಮೂಡಿಸುವ ಭಾವ, ಹೆಜ್ಜೆಗುರುತಿಲ್ಲದ ಕಾಡಿನಲಿ ಹೆಸರಿಲ್ಲದ ಕವಿತೆಯ ಸಾಲೊಂದು ಕಾಡಿದಂತೆ. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಬೇರೇನು ಇರುತ್ತೋ ಇಲ್ವೋ ಜಾನಕಿ ಕಾಲಂ ಮಾತ್ರ ಇರದಿದ್ದರೆ ಕೊಟ್ಟ ಹನ್ನೆರಡು ರೂಪಾಯಿ ಹುಂಡಿಗೆ ಹಾಕಿದ ಹಾಗಾಯಿತು ಅಂದುಕೊಳ್ಳುತ್ತಿದ್ದೆವು.
ಅತಿ ಸಾಮಾನ್ಯ ಓದುಗನ ಅಭಿವ್ಯಕ್ತಿಯಂತೆ ಶುರುವಾಗಿ ಗಾಢವಾದ ಅನುಭವ ಪ್ರಪಂಚವನ್ನು ಏನೂ ವಿಶೇಷ ಅಲ್ಲವೆಂಬಂತೆ ನಮ್ಮೆದುರಿಗೆ ತೆರೆದಿಡುತ್ತಿದ್ದ ಶೈಲಿಯೇ ಹೊಸತಾಗಿತ್ತು. ಅಲ್ಲಿವರೆಗೆ ವಿಮರ್ಶೆ, ಅರ್ಥವಾಗದ್ದನ್ನು ಅರ್ಥವಾಗದ ರೀತಿಯಲ್ಲಿ ತಮ್ಮ ಪಾಂಡಿತ್ಯ ಪ್ರದರ್ಶನಕ್ಕಾಗಿ ಬಳಸಿಕೊಳ್ಳುವ ಪ್ರಾಕಾರವಾಗಿ ಕಂಡಿತ್ತು. ವಿಮರ್ಶೆ ಓದುವುದಕ್ಕೇ ಹೆದರಿಕೆಯಾಗುತ್ತಿತ್ತು. ಈಗಲೂ ಅಷ್ಟೇ, ಎಷ್ಟೋ ವಿಮರ್ಶೆಗಳನ್ನು ಓದಿದರೆ ಗೊಂದಲವಾಗುತ್ತದೆ. ವಿಮರ್ಶೆಯನ್ನೂ ವಿಮರ್ಶಾ ದೃಷ್ಟಿಯಿಂದ ಪರಿಶೀಲಿಸಿ ಅರ್ಥ ಮಾಡಿಕೊಳ್ಳುವ ದೌರ್ಭಾಗ್ಯ ಓದುಗನದ್ದು. ಅಥವ, ವಿಮರ್ಶೆಗಳು ಸಾಮಾನ್ಯ ಓದುಗರಿಗಲ್ಲ!.
ಈಗಲೂ ಜಾನಕಿಯ ಬರಹಗಳನ್ನು ವಿಮರ್ಶೆಯೆಂದು ಸಾಹಿತ್ಯ ಪಂಡಿತರು ಒಪ್ಪದೇ ಇರಬಹುದು. ಒಂದು ರೀತಿಯಲ್ಲಿ ಅದು ನಿಜವೂ ಹೌದು. ಆದರೆ, ಸಾಹಿತ್ಯಾಸಕ್ತಿಯನ್ನು ಹುಟ್ಟುಹಾಕುವಲ್ಲಿ ಅವರ ಕೊಡುಗೆ ಯಾವುದೇ ವಿಮರ್ಶಕನಿಗಿಂತ ಹೆಚ್ಚು. ಕವಿತೆಗಿರಬೇಕಾದ ಲಯದ ಬಗ್ಗೆ, ಕತೆಗಳಿಗೆ ಬೇಕಾದ ಹೊಸತನದ ಬಗ್ಗೆ, ಹಳತನ್ನೇ ಬರೆಯುವ ಹೊಸ ಬರಹಗಾರರ ಬಗ್ಗೆ, ಹೊಸ ಚಿಂತನೆಗೆ ತೆರೆಯದ ಹಳೆಯ ಬರಹಗಾರರ ಬಗ್ಗೆ ಅಲ್ಲಿ ಪ್ರಕಟವಾಗುತ್ತಿದ್ದ ಮುಕ್ತ ಸರಳ ಅಭಿಪ್ರಾಯಗಳು ಯಾರದೋ ಘನತೆಯ ಪ್ರತಿಭೆಯ ಪರಿಮಾಣವನ್ನು ನಿಗದಿಪಡಿಸುವಂತದ್ದಲ್ಲ. ಒಂದು ಪುಸ್ತಕ ಓದಿದ ನಂತರ ಈಸೀ ಚೇರಿನಿಂದ ಎದ್ದು, ಮೈಮುರಿದು, ಅರಳಿರುವ ಹೂವನ್ನು ಮುಟ್ಟಿ ಸುಮ್ಮನೇ ಪ್ರೀತಿಸಿದಂತೆ. ಅನಿಸಿದ್ದನ್ನು ಸ್ನೇಹಿತನಿಗೆ ತಿಳಿಸಿದಂತೆ.
ಲೇಖನಗಳು, ಕತೆಗಳು, ಕಾದಂಬರಿ, ಸೀರಿಯಲ್ಲು, ಸಿನಿಮಾ, ಪತ್ರಿಕೆ, ಬ್ಲಾಗು ಯಾವುದೇ ಇರಬಹುದು…..ಜೋಗಿ ಅನ್ನುವುದಕ್ಕಿಂತ, ಒಂದೇ ಒಂದು ಕವಿತೆಯನ್ನೂ ಬರೆಯದೆ ಕವಿತೆಯ ಬಗ್ಗೆ ಬರೆಯುವ ಜಾನಕಿಯೇ ನಮಗಿಷ್ಟ. ಅವರೇ ಹೇಳುವಂತೆ- ‘ಕವಿತೆ ಬರೆಯದೆಯೇ ಕವಿಯಾಗಿ ಉಳಿಯುವುದು ಲೇಸು’. ಜಾನಕಿ ಒಂದು ಜೀವಂತ ಕವಿತೆಯಾಗುವುದು ಹೀಗೆ.
ಪ್ರಿಯರಾದವರ ಬಗ್ಗೆ ಬರೆಯಲು ಹೋದರೆ ಅಕ್ಷರಗಳು ಮಾಯವಾಗುತ್ತವೆ. ಟೀಕೆ-ಅಸಮಾಧಾನಗಳು ಮರೆತುಹೋಗುತ್ತವೆ. ಎಷ್ಟೇ ಬರೆದರೂ ಜಾನಕಿಯ ಬಗ್ಗೆ ನಮಗಿರುವ ಪ್ರೀತಿಯನ್ನು ಇನ್ನೂ ಪೂರ್ತಿಯಾಗಿ ಸಮರ್ಪಕವಾಗಿ ತಿಳಿಸಲು ಸಾಧ್ಯವಾಗಿಲ್ಲವೇನೋ ಅಂತ ಅನಿಸುತ್ತದೆ. ಆದರೂ ಅಷ್ಟಿಷ್ಟು ಅಕ್ಷರಗಳ ಮೂಲಕ ಈ ಪ್ರೀತಿ. ಇವರನ್ನು ನೀವು ಭೇಟಿಯಾದರೆ ಒಂದು ಅಚ್ಚರಿಯ ಅನುಭವ ನಿಮ್ಮನ್ನು ಮುತ್ತದೆ ಇರಲಾರದು. ಯಾಕೆಂದರೆ, ಜಾನಕಿ ಮಣ್ಣಿನಲ್ಲಿ ಹುಟ್ಟಿದ ಮಗಳು.
No Comments Yet
No comments yet.
Comments RSS TrackBack Identifier URI
ಧಾಕಲೆಯ ಬಗ್ಗೆ ವ್ಯಾಖ್ಯಾನವನ್ನು ಬರೆಯಿರಿ
