ನಗ್ಬೇಕೂಂದ್ರೆ ಮದ್ವೆ ಆಗ್ಬೇಕು, ಅಂದು ಕಣ್ಣೊರೆಸಿಕೊಂಡ!

Posted: ಸೆಪ್ಟೆಂಬರ್ 23, 2007 in ಗಂಡಸ್ರ ಗೋಳು!

ಚಂದಿರ

ಚಂದಿರ 

ಅವನ ನಗುವಿನ ಹಿಂದೆ ವಿಪರೀತ ದುಃಖ ಇದೆ ಅಂತ ನನಗೆ ಮಾತ್ರ ಅನ್ನಿಸ್ತಿತ್ತು. ಅದನ್ನ ಗೆಳೆಯರಿಗೆ ಹೇಳಿದ್ರೆ ನಕ್ಕುಬಿಡ್ತಿದ್ರು, “ನಿಂಗೆ ಯಾವಾಗ್ಲೂ ಅನುಮಾನ. ನೀನು ಇಂಟೆಲಿಜೆನ್ಸ್ ಗ್ರೂಪ್ನಲ್ಲಿರಬೇಕಿತ್ತು” ಅಂತ ಕಿಚಾಯಿಸ್ತಲೇ ಇರ್ತಿದ್ರು. ನಾನೂ ಸುಮ್ಮನಾಗಿಬಿಡ್ತಿದ್ದೆ.

ಮೊನ್ನೆ ಮಾತ್ರ ನನ್ನಿಂದ ಸುಮ್ಮನಿರಲಿಕ್ಕಾಗಲೇ ಇಲ್ಲ. ಘಟ್ಟದ ಕಡಿದಾದ ರಸ್ತೆಯಲ್ಲಿ ನಮ್ಮ ಗಾಡಿ ದಾಟುವಾಗ ರಾತ್ರಿ ಒಂದೂವರೆ. ಜೊತೆಗಿದ್ದವರಿಗೆಲ್ಲ ಕಂಠಮಟ್ಟ ನಿದ್ದೆ, ಅಷ್ಟೇ ಎಣ್ಣೆ. ‘ ರಾತ್ರಿ ಎಲ್ರೂ ಮಲಗಿಬಿಡಬೇಡ್ರೋ, ಡ್ರೈವರ್ರೂ ತಾಚಿ ಮಾಡಿಬಿಡ್ತಾನೆ! ಆಮೇಲೆ, ಬೆಳಗ್ಗೆ ಶೂಟಿಂಗೂ ಇಲ್ಲ… ಷರಟಿಂಗೂ ಇಲ್ಲ!!’ ಅಂದಿದ್ರು ಪ್ರೊಡ್ಯೂಸರ್ರು. ಅದಕ್ಕೇ, ಘಟ್ಟದ ಬೋರು ಬೋರು ರಸ್ತೇಲೂ ಡ್ರೈವರ್ ಮಹೇಶಂಗೆ ಸಾಥ್ ಕೊಡೋದಕ್ಕೆ ನಾನು ಗಂಟು ಬಿದ್ದಿದ್ದೆ.

ಮೊಬೈಲ್ ರಿಂಗಾಯ್ತು. ಸರಿಯಲ್ಲದ ಹೊತ್ನಲ್ಲಿ ಹೆಂಡ್ತಿ ಕರೆ ಮಾಡೋಲ್ಲ. ಎಲ್ರೂ ಮಲಗಿರೋ ಹೊತ್ತು, ಕರರಕರೆ ಮಾಡೋದು ಸೆಟ್ ಅಪ್ ಗಳೇ! ಮಹೇಶನತ್ತ ತಿರುಗಿದೆ. ಅವನ ಕಂಗಳಲ್ಲಿ ಮುಚ್ಚಿಡಲೆತ್ನಿಸುವ ಭಯಾನಕ ಅಸಹನೆ. ನೀವೆಣಿಸೋ ಅಂಥಾದ್ದೇನಿಲ್ಲ ಬಿಡಿ! ಅನ್ನುವ ಭಾವ. ಆಮೇಲೆ ಭಾಳ ಹೊತ್ತು ಗಾಡಿ ಓಡಿಸ್ಲಿಲ್ಲ. ಸ್ವಲ್ಪ ದೂರದಲ್ಲೇ ಕಾರಿಂದ ಇಳಿದು, ಬದಿಗೆ ಬಂದು ನಿಂತ. ಪಾಪಿ! ಸಿಗರೇಟೂ ಸೇದದವನು!! ನಾನೇ ಒಂದು ದಮ್ ಎಳೆದು, ಅವನ ನಗುವಿನ ಹಿಂದಿದ್ದ ಅಳುವನ್ನ ಕೆಣಕಿದೆ. ಮಹೇಶ ಬಿಕ್ಕಿ ಬಿಕ್ಕಿ ಅತ್ತುಬಿಟ್ಟ.

ಮನೆಗೆಲಸಕ್ಕೆ ಬರತಿದ್ದ ತಾಯಮ್ಮನ ಮುದ್ದಾದ ಮಗಳು ಚಂದ್ರಿಯ ಬಗ್ಗೆ ಹೇಳಿದ. ಅವಳೊಡನೆ ತಾನು ನೋಡಿದ ಒಂದೇ ಒಂದು ಸಿನೆಮಾ ಬಗ್ಗೆ ಹೇಳಿದ. ಕೊನೆಗೆ, ಅಮ್ಮ ಸಾಯುವಾಗ ಅಣ್ಣನ ಮಗಳನ್ನೇ ಮದುವೆಯಾಗೋದಾಗಿ ಮಾತು ತೊಗೊಂಡಿದ್ದು,  ಅಮ್ಮ ಹೇಳಿದಾಳೆ ಅಂತ ಹಳ್ಳಕ್ಕೆ ಬೀಳ್ಬೇಡ   ಅಂತ ತಮ್ಮ ಹೇಳಿದ್ದು, ಚಂದ್ರಿಯ ಕ್ಷಮೆ ಕೇಳಿ ಮಾವನ ಮಗಳಿಗೆ ತಾಳಿ ಕಟ್ಟಿದ್ದು, ಎಲ್ಲವನ್ನೂ ಹೇಳಿಕೊಂಡ.  ಅವತ್ತು ಚಂದ್ರಿಯ ಕಂಗಳು ನಿಗಿನಿಗಿ ಕೆಂಡವಾಗಿದ್ದನ್ನ ನೆನಸ್ಕೊಂಡ.

ಎಲ್ಲ ಸರಿ ಹೋಯ್ತಲ್ಲ? ಮತ್ಯಾಕ್ ನೋವು? ಅಂದಿದ್ದಕ್ಕೆ, ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ.

ಮೊದಲ ರಾತ್ರಿ ದಿವ್ಯ ರಾತ್ರಿ. ಆಸೆ- ಆಶೋತ್ತರಗಳ ಕಲಸುಮೇಲೋಗರ ಅದು. ಎಷ್ಟೋ ದಿನ ಅಮುಕಿಕೊಂಡಿದ್ದ ಕನಸು ಪೂರ್ಣವಾಗೋ ದಿನ. ಪೂರ್ ಮಹೇಶ! ಹಾಸಿಗೆ ಮೇಲೆ ಬಿಕ್ಕಿ ಬಿಕ್ಕಿ ಅಳುತ್ತ ಕೂತ ಹೆಂಡತಿ…. ಮುಟ್ಟಿದರೆ ಚೀರುತಿದ್ದವಳು.  ಮಹೇಶ ಹೈರಾಣಾದ. ಮೊದಲ ರಾತ್ರಿ, ನೆಲದ ರಾತ್ರಿಯಾಯ್ತು. ಹಾಲು, ಸೇಬು, ಚೆಲ್ಲಾಪಿಲ್ಲಿಯಾದ ಹೂವಿನ ಹಾಸಿಗೆ, ಬೆಳಗಿನ ಜಾವದ ಮೈಮುರಿತ, ಎಲ್ಲವೂ ಕನಸಾಗಿಯೇ ಉಳಿಯಿತು.

ಅವನೂ ಕಾರಣ ಕೇಳಲಿಲ್ಲ. ಅವಳೂ ಹೇಳಲಿಲ್ಲ. ಬೆಳಗ್ಗೆ ಮನೆಯಿಂದ ಹೊರಟವನು ಸಂಜೆ ವಾಪಸು ಬರತಿದ್ದ. ‘ ನೀರು ಕಾಯಿಸ್ಲಾ? ಆಕೆ ಕೇಳ್ತಿದ್ದಳು. ಆಕಾಶ ನೋಡುತ್ತ ಹುಂ ಗುಟ್ಟುತ್ತಿದ್ದ.

ಊಟ? ಕೇಳಿದರೆ, ‘ಊಹೂಂ’ ಅಂತಿದ್ದ. ಎಣಿಸಿಟ್ಟರೆ ನಾಲ್ಕೇ ಮಾತು.

ಕಾರಿನ ಮಿರರಿನಲ್ಲಿ ಕೈಕೈ ಹಿಡಿದು ಪಿಸುಗುಟ್ಟುವ ಜೋಡಿಗಳು! ಕಂಡಾಗೆಲ್ಲ ಮಹೇಶನ ಜೀವ ಝಲ್ಲೆನ್ನುತ್ತಿತ್ತು. ತನ್ನ ರೋಮ ನಿಮಿರಿ ನಿಲ್ಲಿಸುವ ಅವಳಿಲ್ಲದೇ ಖಿನ್ನನಾಗುತ್ತಿದ್ದ. ಬರೀ ಪ್ರಶ್ನೆಗಳು. ನಿದ್ರೆಗೆ ಜಾರುವುದೊಂದೇ ಉತ್ತರವೆನಿಸಿತು.

ಆಸ್ಪತ್ರೆಯ ಹಾಸಿಗೆ ಮೇಲೆ ಬಿದ್ದುಕೊಂಡವನಿಗೆ, ಅಸ್ಪಷ್ಟವಾಗಿ ಕೇಳ್ತಿತ್ತು. ಒಟ್ಟು ಮೂವತ್ತೆಂಟು ಮಾತ್ರೆಗಳು. ಬದುಕಿದ್ದೇ ಪುಣ್ಯ!

ಮನೇಲಿ ರಾದ್ಧಾಂತ. ನಾನು ಮೊದ್ಲೇ ಹೇಳಿರಲಿಲ್ವಾ? ಅಂದ ತಮ್ಮ.  ಅತ್ತೆ- ಮಾವ ಮಗಳಿಗೆ ಬುದ್ಧಿವಾದ ಹೇಳಿದರು.

ಇವಳನ್ನ ಮದುವೆಯಾಗಿ ನಾನು ಷಂಡನಾದೆ. ನಾಲ್ಕು ವರ್ಷವಾದ್ರೂ ಒಂದು ಮಗುವಿಲ್ಲ. ಎಲ್ರೂ ಛೇಡಿಸ್ತಿದ್ದಾರೆ ಅಂದ. ಅವಳು ಎದ್ದಳು. ಅಷ್ಟೇ ತಾನೆ? ಬಾ ಮಲಗ್ತೀನಿ. ಮಗು ಕೊಟ್ ಬಿಡು ಅಂದ್ಲು. ಯಾರಿಗೆಷ್ಟು ಅರ್ಥವಾಯ್ತೋ? ಸಮಸ್ಯೆ ತೀರ್ತು ಅಂತ ಚೆನ್ನಾಗಿ ಉಂಡು ಹೊರಟ್ರು.

ಅವತ್ತು ರಾತ್ರಿ… ಅದೇನು ಮೊದಲ ರಾತ್ರಿಯಲ್ಲ. ಅವನು ಮೊದಲೇ ಹಾಸಿಗೆ ಮೇಲೆ ಬಿದ್ದುಕೊಂಡ. ಅರ್ಧ ಮಂಚ ಆಕ್ರಮಿಸಿ. ಅವಳು, ಅವನ ಪಕ್ಕದಲ್ಲೇ ಬಿದ್ದುಕೊಂಡಳು. ಅವನಾಗಿಯೇ ಮುಟ್ಟಲಿಲ್ಲ. ಅವಳೇ ಕೆಣಕಿದಳು. ಮಗು ಬೇಕಂದ್ಯಲ್ಲಾ! ಕೊಡು ಬಾ!!

ಅದಕ್ಕೇ ಕಾಯ್ತಿದ್ದೋನಂತೆ, ಭೋರ್ಗರೆದ, ಬಸವಳಿದು ಬಿದ್ದ.

ನಾನು ಗಾಬರಿಯಾಗಿ ನಿಂತಿದ್ದೆ. ” ಸಾರ್… ಹೆಣವನ್ನೂ ಸಂಭೋಗಿಸಬಹುದು ಗೊತ್ತಾ? ” ನಾನು ಬಿಟ್ಟ ಕಣ್ಣು ಬಿಟ್ಟೇ ಇದ್ದೆ. ” ನಾನು ಅವತ್ತು ಅದನ್ನೇ ಮಾಡಿದ್ದು.” ” ಯಾವ ಜನ್ಮದ ಪುಣ್ಯವೋ? ನನ್ನ ಶ್ರಮದ ಒಂದು ಕಣ ಅವಳ ಗರ್ಭ ಸೇರ್ತು. ನಾನೂ ಅಪ್ಪನಾದೆ! ಹೆರಿಗೆಯಾಗಿ ಈವತ್ತಿಗೆ ಹದಿನೈದು ದಿನ. ಏನಾದ್ರೂ ಬೇಕಿದ್ರೆ ಫೋನ್ ಮಾಡು ಕಳಿಸಿಕೊಡ್ತೀನಿ ಅಂದಿದ್ದೆ. ಒಣ ಜಂಭ ಬೇರೆ. ಯಾರೂ ಇಲ್ಲದ ಹೊತ್ನಲ್ಲಿ ಹೀಗೆ ಕಾಲ್ ಮಾಡ್ತಾಳೆ.”

“ಎಲ್ಲಾ ಚಂದ್ರಿಯ ಶಾಪ ಸಾರ್”.

ಸಿಗರೇಟು ಮುಗಿದು ತುಟಿ ಸುಟ್ಟಿತು.

ಮದುವೆ ಆಗ್ಬೇಕು ಸಾರ್. ಆಗ ಒಳಗಿನ ದುಃಖ ಕರಗಿಹೋಗತ್ತೆ. ನಗದೇ ಬೇರೆ  ದಾರಿಯೇ ಇರೋಲ್ಲ! ಅಂದವನು ನಗು ನಗುತ್ತಲೇ ಗಾಡಿ ಹತ್ತಿದ. ನಾನೂ ಕೂಡಾ. ಆದ್ರೆ ಈಗ, ಮಲಗ್ಬೇಕಂದ್ರೂ ನಿದ್ದೆಯೇ ಬರಲಿಲ್ಲ. . . . .

Advertisements
ಟಿಪ್ಪಣಿಗಳು
 1. mauni ಹೇಳುತ್ತಾರೆ:

  ಚೆನ್ನಾಗಿದೆ.
  ಗಂಡು ಗಂಡು ಭಾವನೆಗಳನ್ನ ಚೆನ್ನಾಗಿ ತೆರೆದಿಟ್ಟಿದ್ದೀರಿ. ಒಳ್ಳೆ ಪ್ರಯತ್ನ

 2. Tina ಹೇಳುತ್ತಾರೆ:

  ‘gandu bhaava’ or ‘Hennu Bhaava’ antha divisions create maadodu illi avashyavilla annisthade Mauniyavare.
  Ivu bhaavagalu. Ashte.
  Illi Mahesha aLuvudu, chandriyannu nenesukoLLuvudu, avana Hendathiyodane raajiyaaguvudu, ellavannu nenedu kaNNoresikoLLuvudu, Ivellvoonoo haage ‘stereotypical’ aagi nodidare hennu bhaavagale allave?

  BahaLa IshTavaayitu.

 3. ಮೌನಿ ಹೇಳುತ್ತಾರೆ:

  ಟೀನಾ,
  ನೀವು ಹೇಳೋ ಹಾಗೆ ಈ ಅಳು, ಹಳೆ ಕನವರಿಕೆಗಳು- ಇವೆಲ್ಲ ಹೆಣ್ಣು ಭಾವಗಳೇ ಹೌದು. ನಮ್ಮ ಕಲ್ಲು ಹೃದಯ ಕರಗಿ ಕಣ್ಣೀರಾಗೋದು ಕಷ್ಟ. ಹಾಗೂ ಅದು ಕರಗಿ ಅತ್ತರೆ, ಅಲ್ಲಿ ಕೆಲಸ ಮಾಡೋದು ಗಂಡು ಭಾವ!!

  ಹೆಣ್ಣು ಸಹಿಸುವಷ್ಟು ಸಲೀಸಾಗಿ ಗಂಡು ಸೋಲು ಸಹಿಸಲಾರ. ಅಲ್ವೇ?
  – ಮೌನಿ

 4. Tina ಹೇಳುತ್ತಾರೆ:

  ಮೌನಿಯವರೆ,
  ನಿಮ್ಮ ಅರಿವಿನ ಬಗ್ಗೆ ಗೌರವವಿದೆ. ಹೆಣ್ಣು ’ಸಲೀಸಾಗಿ ಸಹಿಸುತ್ತಾಳೆ’ ಅನ್ನುವುದನ್ನು ನಾನು ಸೋಲಿಗಿಂತ ನೋವಿಗೆ ಅನ್ವಯಿಸುತ್ತೇನೆ. ಸೋಲು ಸಹಿಸುವುದು ಹೆಣ್ಣಿಗೆ ಸುಲಭ ಎಂಬುದು ನಿಮ್ಮ ಅಭಿಪ್ರಾಯವಾದರೆ ಅದಕ್ಕೆ ನನ್ನ ವಿರೋಧವಿದೆ.
  ಮತ್ತು ನಾನು ಅಳು,ನಾಸ್ತಾಲ್ಜಿಯಾ ಇವು ಹೆಣ್ಣು ಭಾವಗಳು ಅಂತ ಹೇಳಲಿಲ್ಲ- ಅವು ಹೆಣ್ಣಿಗೆ ಹಚ್ಚಲಾದ ‘stereotyped’ ಭಾವಗಳು ಎಂದಿದ್ದು. ಹೆಣ್ಣು ಹೀಗೇನೇ, ಗಂಡು ಹೀಗೇನೇ ಅಂತ ಹಣೆಪಟ್ಟಿ ಹಾಕಿ ಕೂರಿಸಿಬಿಡುತ್ತೇವಲ್ಲ ಅದು ಸರಿಯಲ್ಲ, ಅಲ್ವೇ?

 5. jeevadani ಹೇಳುತ್ತಾರೆ:

  ಟೀನಾ ಮತ್ತು ಮೌನಿಯವರಿಗೆ, ನಮಸ್ತೇ.
  ಇದು, ಸ್ನೇಹಿತನೊಬ್ಬನ ಅನುಭವದ ನಿರೂಪಣೆಯಷ್ಟೆ. ಇಲ್ಲಿ, ಮಹೇಶನ ಹೆಂಡತಿ ಕಥೆ ಹೇಳಿಕೊಳ್ಳಲಿಕ್ಕೆ ಶುರುವಿಟ್ಟರೆ, ಅದು ಮತ್ತೊಂದು ಹೆಣ್ಣು ಹೆಣ್ಣು ಕಥೆಯಾಗಬಹುದೇನೋ?
  ಮಗುವಿಗಾಗಿ ಅದು ಬೇಕು ಅನ್ನುವ ಗಂಡ ನಯವಂಚಕನಂತೆ ಕಂಡರೂ ಕಾಣಬಹುದು. ಅವಳ ಹಿಂದೆ ಯಾವುದೋ ಅಮರ ಪ್ರೇಮ ಕಥೆ ಬಿಚ್ಚಿಕೊಳ್ಳಬಹುದು. ಹೀಗೇ, ಏನೇನೋ…
  ಆದರೆ,ಇಲ್ಲಿ ಕಥೆ ಹೇಳಿಕೊಳ್ತಿರೋದು ಮಹೇಶ. ಹಾಗಾಗಿಯೇ ಇದು ಗಂಡಸಿನ ಗೋಳು.
  ಟೀನಾ ಪ್ರತಿಕ್ರಿಯೆ ಆರೋಗ್ಯಕರವಾಗಿದೆ. ಹೌದು. ಹಣೆಪಟ್ಟಿ ಹಚ್ಚೋರು ನಾವೇ. ಆದರೆ, ಹೆಣ್ಣು ಅತ್ತಾಗ ಅನುಕಂಪ ತೋರೋ ಮಂದಿ, ಗಂಡು ಅತ್ತಾಗ ’ಛೀ! ಹೆಣ್ಣಪ್ಪಿ!’ ಅನ್ನೋದ್ಯಾಕೆ?
  – ಚಂದಿರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s