ಬ್ಲಾಗಿಸು ಕನ್ನಡ ಡಿಂಡಿಮವ…

Posted: ಅಕ್ಟೋಬರ್ 29, 2007 in ಸಂವಹನ

ನವೆಂಬರ್ ೧, ಕನ್ನಡಿಗರ ಹೆಮ್ಮೆಯ ದಿನ. (ಹೊಸತಾಗಿ ಹೇಳ್ತಿದ್ದೀನಿ ಅಂತ ಬೈಕೊಳ್ಬೇಡಿ ಮತ್ತೆ!)
ಪತ್ರಿಕೆಗಳಲ್ಲಿ ವಾರಕ್ಕೊಂದು ದಿನ ವಿಶೇಷ ಬರಹಗಳಿಗೆ, ಸಾಹಿತ್ಯಕ್ಕೆ, ಕತೆ-ಕವನ-ಪ್ರಬಂಧಗಳಿಗೆ ಮೀಸಲು. ಆದ್ರೆ ಈ ಬ್ಲಾಗವತಾರದಿಂದಾಗಿ ನಿತ್ಯವೂ ಒಂದಲ್ಲ ಒಂದು ಕೀಪ್ಯಾಡಿನಿಂದ ಹೊಸತೊಂದು ಕೃತಿ ಮೂಡಿಬರುತ್ತಿದೆ. ಹಾಗೆ ಬರುತ್ತಿರುವುದರಲ್ಲಿ ಶೇ. ೧೦ ಗಟ್ಟಿ ಬರಹಗಳು ಅಂದುಕೊಂಡರೂ, ಕನ್ನಡ ಬರಹ ಜಗತ್ತು ಶ್ರೀಮಂತವಾಗುತ್ತಿದೆ ಅಂತ ಹೇಳಲಡ್ಡಿಯಿಲ್ಲ.
ಈ ಬ್ಲಾಗಿಗರಲ್ಲಿ ಸಿಲಿಕಾನ್ ಕಣಿವೆಯ ಕಂದಮ್ಮಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ. ಇನ್ನುಳಿದಂತೆ ಹೊರನಾಡ ಕನ್ನಡಿಗರು, ಪರದೇಶಗಳಲ್ಲಿ ಕಳೆದುಹೋಗಬಾರದೆಂದು ನಿರ್ಧರಿಸಿ ಬ್ಲಾಗ್ ಬರಹದ ಮೂಲಕ ನಿತ್ಯ ಸಂಪರ್ಕದಲ್ಲಿರುವವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ವಿಪರೀತ ಓದಿಕೊಂಡವರೆಲ್ಲ ಕನ್ನಡ ಮರೆಯುತ್ತಾರೆ ಅನ್ನುವವರಿಗೂ ಈ ಬ್ಲಾಗುಗಳು ಉತ್ತರ ನೀಡುತ್ತವೆ.
ಇಂದಿನ ಸಾಫ್ಟ್ ವೇರ್ ಯುಗದಲ್ಲಿ ಭುವನೇಶ್ವರಿಯ ಮಕ್ಕಳು ಕನ್ನಡ ಡಿಂಡಿಮ ಬ್ಲಾಗಿಸತೊಡಗಿದ್ದಾರೆ!!

 * * * *

“ಇವತ್ತಿನ ಪೀಳಿಗೆಗೆ ಓದೋ ಸಹನೆಯೇ ಇಲ್ಲ. ಎಲ್ಲರೂ ಬರೀತೀನಿ ಅನ್ನೋರೇ….! ಈಗೆಂಥದೋ ಈ ಬ್ಲಾಗು? ಇದು ಬೇರೆ ಕೇಡು!!”
ಅಜ್ಜ ಸಿಡುಕುತ್ತಿದ್ದರು.
ಅವರು ನನ್ನ ಚಿಕ್ಕಜ್ಜ. ಮೊದಲಿಂದ್ಲೂ ಅವರಿಗೆ ಪುಸ್ತಕಗಳು ಅಂದ್ರೆ ಆಯಿತು. ಅದು ಈಗಿನಂತೆ ’ಓದುವ ಪ್ರವೃತ್ತಿಯವರೆಲ್ಲ ಬರೆಯಲು ಪ್ರಯತ್ನಿಸಲೇಬೇಕು’ ಅಂತ ತಮಗೆ ತಾವೇ ನಿಯಮ ರೂಪಿಸಿಕೊಂಡಂಥ ಕಾಲವಲ್ಲ.ಆಗಿನ ಕಾಲದ ಇತರೆಲ್ಲ ಶುದ್ಧಾಂಗ ಓದುಗರಂತೆ ಅವರೂ ಒಬ್ಬ ಓದುಗರು.
ಸಾಫ್ಟ್ ವೇರ್ ಮಕ್ಕಳಿಂದಾಗಿ ಅವರ ಮನೆಗೂ ಕಂಪ್ಯೂಟರ್ರು, ನೆಟ್ಟುಗಳು ಕಾಲಿಟ್ಟಿದ್ದವು. ೭೦ರ ನನ್ನಜ್ಜನಿಗೆ ಹೊಸತನ್ನು ಕಲಿಯುವುದರಲ್ಲಿ ಏನೋ ಖುಷಿ. ಆ ಸಂಭ್ರಮದ ಸಂಕೋಚಕ್ಕೋ ಏನೋ ಯಾವಾಗಲೂ ಹೊಸ ಪ್ರಯೋಗಗಳನ್ನು ಹೀಯಾಳಿಸುತ್ತಲೇ ಅದರಲ್ಲಿ ಕೈ ಹಕುತ್ತಿದ್ದರು ಅವರು.
“ಕನ್ನಡದಲ್ಲಿ ಎಷ್ಟೆಲ್ಲ ಬರ್ತಿದೆ ನೋಡಿ… ಹೊಸ ಹೊಸ ಹುಡುಗರು ಬರೀಲಿಕ್ಕೆ ಶುರು ಮಾಡಿದಾರೆ” ಅಂತ ನಾನು ಅವರಿಗೆ ಮೊದಲು ಒಂದೆರಡು ಬ್ಲಾಗು ತೋರಿಸಿದ್ದೆ. ಹಾಯಾಗಿ ಕಾಲುಚಾಚಿ ಓದಿನ ಸುಖ ಅನುಭವಿಸುತ್ತಿದ್ದವರಿಗೆ ಹೀಗೆ ಕುಳಿತು ಕಣ್ಣು ನಿರುಕಿಸಿ ಪರದೆ ನೋಡೋದು ಕಿರಿಕಿರಿ ಅನಿಸಿರಬೇಕು, ಈ ಮೇಲಿನಂತೆ ನನಗೆ ಮಂಗಳಾರತಿ ಮಾಡಿದ್ದರು!

ನಾಲ್ಕೇ ತಿಂಗಳು…
ಅವಧಿಯಲ್ಲಿ ಗಾಳಿಬೆಳಕು ನೋಡಿದ್ಯಾ?
ಮೈಸೂರು ಪೋಸ್ಟ್ ನಲ್ಲಿ ಹೊಸತು ಏನೂ ಬಂದಿಲ್ಲ ಯಾಕೆ?
ಭಾಮಿನಿ ಷಟ್ಪದಿ ಬ್ಲಾಗಾಗಿದೆ. ಆ ಹೆಸರಿನದೊಂದು ಕಾಲಮ್ಮೂ ಇದೆ ಅವಧಿಯಲ್ಲಿ…
ನೆಲದ ಮಾತು ಹೊಸತು.
ಪಡಖಾನೆಯ ಹುಡುಗಿ, ಸಂಕಲನ ಮಾಡಬಹುದು!
ಋಜುವಾತು ನಿಂತು ನಿಂತು ಬರುತ್ತೆ…
ಈ ಸಿಂಧು ಹುಡುಗಿ ಯಾರು?
ಜೋಗಿ ಮನೆಗಿಂತ ಓದು ಜನಮೇಜಯ ಇಷ್ಟ. ಅಲ್ಲಿ ಎಷ್ಟೊಂದು ಪುಸ್ತಕಗಳು!
ಬುಕ್ ಬಾಜಾರ್ ಒಳ್ಳೆ ಪ್ರಯತ್ನ…
ಜೀವ ದನಿಯ ಸದ್ದು ಅಡಗಿದಹಾಗೆ ಕಾಣತ್ತಲ್ಲ ಯಾಕೆ?
– ವಾರಕ್ಕೊಮ್ಮೆ ಕಾಲ್ ಮಾಡುವ ಅಜ್ಜ, ಈಗ ಮಾತಾಡುವುದು ಬರೀ ಇಂಥದ್ದನ್ನೇ!
ಅಷ್ಟೇ ಅಲ್ಲ, “ಕಂಪ್ಯೂಟರ್ರಲ್ಲಿ ಇಷ್ಟೊಂದು ವೆರೈಟಿ ಕನ್ನಡ ಬರಹಗಳು ಓದೋಕೆ ಸಿಗ್ತಿರೋದು ಒಳ್ಳೇದೇ.
ಪುಸ್ತಕ ಹಿಡಿಯೋ ಸಹನೆ ಇಲ್ಲದವರಿಗೆ ಇದು ಅರಾಮ. ಓದದೇ ಕಳೆದುಹೋಗುವ ಕನ್ನಡ, ಕಡೆಪಕ್ಷ ಬರೆದಾದರೂ ಉಳಿಯಲಿ!” ಅಂತ ರಾಜಿಗೆ ಇಳಿದಿದ್ದಾರೆ ನನ್ನಜ್ಜ.
ಆದರೂ, ಕೆಲವೊಂದು ತೀರಾ ಒಳ್ಳೆಯ ಲೇಖನಗಳನ್ನ ಓದಿದಾಗ,”ಇದು ಪೇಪರ್ರಲ್ಲಿ ಬಂದ್ರೆ ಎಷ್ಟು ಚೆನ್ನ!” ಅಂತ ಅವರು ಗೊಣಗೋದು ತಪ್ಪಿಲ್ಲ.
ಕೆಲವೊಮ್ಮೆ ನನಗೂ ಹಾಗನ್ನಿಸತ್ತೆ. ನಿಮಗೆ?

Advertisements
ಟಿಪ್ಪಣಿಗಳು
 1. ವಿಕಾಸ್ ಹೆಗಡೆ ಹೇಳುತ್ತಾರೆ:

  ನನಗೂ ಹಾಗೇ ಅನ್ನಿಸುತ್ತೆ. ಒಳ್ಳೊಳ್ಳೆ ಬರಹಗಾರರು ಒಳ್ಳೆ ಬರಹಗಳನ್ನು ಪತ್ರಿಕೆಗೆ ಕಳಿಸೋಲ್ಲ. ಕೆಲವರಿಗೆ ವಿಶ್ವಾಸ ಇರಲ್ಲ, ಇನ್ನು ಕೆಲವರಿಗೆ ಉದಾಸೀನ.
  ನಮ್ಮ ಪತ್ರಿಕೆಗಳು, ಹಿರಿಯರೂ ಕೂಡ ಬ್ಲಾಗ್ ಲೋಕದ ಬರಹಗಾರರನ್ನು ಗುರುತಿಸಲು, ಲೇಖನಗಳನ್ನು ಪತ್ರಿಕೆಗೆ ಬಳಸಿಕೊಳ್ಳಲು ಇನ್ನೂ ಕ್ರಿಯಾಶೀಲರಾಗಿಲ್ಲ.
  ಆ ಕಾಲ ಮುಂದೆ ಬಂದೇ ಬರತ್ತೆ ಅಂತ ಖಾತ್ರಿ ಇದೆ. ಅಂತೂ ಈ ಬ್ಲಾಗ್ ಅನ್ನೋದು ಕನ್ನಡಕ್ಕೆ ಸಹಾಯ ಆಗಿರೋದಂತೂ ಹೌದು.

 2. Sindhu ಹೇಳುತ್ತಾರೆ:

  ಅಜ್ಜನ ಮೈಲ್ ಐಡಿ ಬೇಕು. ನನ್ ಐಡಿಗೆ ಕಳಿಸಿ.
  ಅಜ್ಜನೆಂದರೇ ಮಜ. ಇನ್ನು ಓದುವುದೆಂದರೆ ಇಷ್ಟವಿರುವ ಅಜ್ಜ ಆಹ್ ಇನ್ನೆಷ್ಟು ಚೆನ್ನಾಗಿರಬಹುದು.. ಅವರ ಕಣಜದಲ್ಲಿ ಇರುವ ಕತೆಗಳಿಗೆ ಕಿವಿಯಾಗಲು ಸಾಧ್ಯವಾ ನೋಡ್ಬೇಕು.

  ನಾನೊಬ್ಬ ಬ್ಲಾಗಿಗಳಾಗಿ ನನಗೆ ಬ್ಲಾಗ್ ಸಂವಹನೆಗೆ ಸುಲಭ ಅನ್ಸುತ್ತೆ. ಆದರೆ ಓದುಗಳಾಗಿ ನೋಡಿದರೆ ಯಾವುದೇ ಪೇಪರಿನ ಸಾಪ್ತಾಹಿಕ ಪುರವಣಿಯೇ ಜಾಸ್ತಿ ಇಷ್ಟವಾಗೋದು.

  ಪ್ರೀತಿಯಿಂದ
  ಸಿಂಧು

 3. Tina ಹೇಳುತ್ತಾರೆ:

  ಅಜ್ಜಯ್ಯನಿಗೆ,
  ಸಾಷ್ಟಾಂಗ ನಮಸ್ಕಾರಗಳು. ನಿಮ್ಮ ಉತ್ಸಾಹ, ನಮ್ಮ ಬರಹಗಳನ್ನು ಓದುವ ಹುಮ್ಮಸ್ಸು ನಮಗೆ ಚೈತನ್ಯ ನೀಡಿದೆ. ನಿಮ್ಮ ಹಾಗೇ ಹಿರಿಕಿರಿಯರೆನ್ನದೆ ಹೆಚ್ಚು ಹೆಚ್ಚು ಕನ್ನಡಿಗರು ಬ್ಲಾಗ್ ಲೋಕಕ್ಕೆ ಕಾಲಿಕ್ಕಿ ಸಂವಾದ ನಡೆಸುವ ಹಾಗಾದರೆ ನಾವು ಕಂಪ್ಯೂಟರ್ ಪರದೆಯ ಮುಂದೆ ಕುಣಿದಾಡಿಬಿಟ್ಟೇವು! ನಿಮಗೆ ಹಾಗೂ ’ಜೀವದನಿ’ಯ ಬಳಗಕ್ಕೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.

  -ಟೀನಾ

 4. jeevadani ಹೇಳುತ್ತಾರೆ:

  ಹುಡುಗಿಯರು ನನ್ನ ಅಜ್ಜನ ಹಿಂದೆ ಬಿದ್ದಿರೋದು ಖುಷಿಯ ಸಂಗತಿ.
  🙂
  ಇರಲಿ. ಅವರೂ ಜೀವ ದನಿಯ ’ಜೀವ’ ಅಥವಾ ’ದನಿ’ಯಲ್ಲೊಬ್ಬರಾಗಿದ್ದಾರೆ.
  ಸಿಂಧು,
  ಅಜ್ಜ, jeevadani@gmail.com nalli ಸಿಗುತ್ತಾರೆ.

  ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

 5. Ranjana Hegde ಹೇಳುತ್ತಾರೆ:

  ಅಜ್ಜ ಇಷ್ಟೋಂದು active ಆಗಿದ್ದಾರೆಂದರೆ ತುಂಬಾನೇ ಖುಶಿ. ನಮ್ಮ ಅಜ್ಜ ಅಜ್ಜಿಯರು ನಮ್ಮ ಹೊಸತನದಲ್ಲಿ ಭಾಗಿಯಾದರೆ ಎನೋ ಒಂದು ಬಗೆಯ ಸಂತೋಷ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s