Archive for ನವೆಂಬರ್ 20, 2007

ನನಗೆ ಕ್ರಿಕೆಟ್ ಅಂದರೆ ಆರನೇ ಪ್ರಾಣ. ಪಂಚಪ್ರಾಣಗಳ ನಂತರದ ಸ್ಥಾನ ಅದಕ್ಕೇ. ಒಂದೇ ಕೊರತೆ ಅಂದ್ರೆ ಆಡಲಿಕ್ಕೆ ಬರೋಲ್ಲ! ಬೌಲಿಂಗ್ ಗೆ ನಿಂತರೆ ಎದುರಾಳಿಗಳಿಗೆ ಸುಗ್ಗಿ, ಬ್ಯಾಟಿಂಗ್ ಗೆ ಇಳಿದ್ರೆ, ನಮ್ಮವರಿಗೆ ಕಿರಿಕಿರಿ.ಆದರೂ ನಮ್ಮ ಟೀಮಿನ ಆಡದ ನಾಯಕ ನಾನು! ಹಾಗಂತ ಅವರೇನೂ ಸುಮ್ ಸುಮ್ನೆ ನನ್ನನ್ನ ನಾಯಕ ಮಾಡಿರ್ಲಿಲ್ಲ. ನಾನು ನಿಜವಾಗ್ಲೂ ಸ್ಟ್ರ್ಯಾಟಜಿ ಎಕ್ಸ್ ಪರ್ಟ್ ಆಗಿದ್ದೆ. ಯಾರಿಗೆ ಯಾವಾಗ ಬೌಲಿಂಗ್ ಕೊಡಬೇಕು? ಯಾರ ಕೈಗೆ ಬ್ಯಾಟ್ ಕೊಡಬೇಕು, ಯಾರಿಗೆ ಎಲ್ಲಿ ಚೆಂಡೆಸೆದರೆ ಮುಗ್ಗರಿಸುತ್ತಾರೆ? ಇವೆಲ್ಲವನ್ನೂ ನಾನೇ ನಿರ್ಧರಿಸ್ತಿದ್ದೆ. ಅದಕ್ಕೇ ನಾನಿಲ್ದಿದ್ರೆ ಅವರ್ಯಾರಿಗೂ ಕೈಕಾಲೇ ಆಡ್ತಿರಲಿಲ್ಲ.

ಹೀಗೆ ಕ್ರಿಕೆಟ್ ಆಡ್ಲಿಕ್ಕೇಂತಾನೇ ಮಂಡ್ಯಕ್ಕೆ ಹೋಗಿದ್ದು ನಾವು. ಸಾಯಂಕಾಲ ಏಳರ ಹೊತ್ತಿಗೆ ಆಟ ಮುಗಿಯಿತು. ರಾತ್ರಿ ಊರಿಗೆ ಹೋಗಿಬಿಟ್ಟರೆ ವಾಸಿ ಅಂತ ನಾನಂದೆ. “ಸುಮ್ನಿರೋ. ಫೀಲ್ಡಲ್ಲಿ ಬ್ಯಾಟಿಂಗ್ ಮಾಡಾಯ್ತು, ಈಗ ಹೋಟ್ಲಲ್ಲೂ ಸ್ವಲ್ಪ ಬ್ಯಾಟಿಂಗ್ ಮಾಡೋಣ” ಹಾಗಂದ ಮಂಜ. ಅವನು ಟೀಮಿನ ಬ್ಯಾಟ್ಸ್ ಮನ್. ಅವತ್ತಂತೂ ಆರಂಭದಲ್ಲಿ ಕ್ರೀಸಿಗೆ ಬಂದವನು ಟೀಂ ಗೆಲ್ಲೋವರೆಗೂ ಅಲ್ಲೇ ಇದ್ದ. ಅವನು ಚೆಂಡು ಮುಟ್ಟಿದರೆ ಅದು ಬೌಂಡರಿಯಾಚೆ! ಈಗ ಸಖತ್ತಾಗಿ ಹಸಿದಿರಬೇಕು, ಹೋಟೆಲಲ್ಲಿ ಭರ್ಜರಿಯಾಗಿ ಊಟ ಮಾಡೋಣ ಅಂತಿದಾನೆ ಇವನು ಅಂತಲೇ ನಾನು ’ಬ್ಯಾಟಿಂಗ್’ಗೆ ಅರ್ಥ ಕಟ್ಟಿಕೊಂಡಿದ್ದೆ. ನಾನು ಊಟ ಬೇಡ ಅಂದಿದ್ರೂ ಅವರೇನು ಕೇಳ್ತಿರಲಿಲ್ಲ. ಇಷ್ಟಕ್ಕೂ ನನ್ನ ಮಾತಿಗೆ ಬೆಲೆ ಇದ್ದದ್ದು ಗ್ರೌಂಡ್ ನಲ್ಲಿ ಮಾತ್ರವೇ ಹೊರತು ಅದರ ಹೊರಗಲ್ಲ!

ಟೇಬಲ್ಲಲ್ಲಿ ಊಟಕ್ಕೆ ಕುಳಿತವರು ಆಟವನ್ನ ಮೆಲುಕು ಹಾಕ್ತಿರುವಾಗ ಯಾರೋ ಮಂಜನ್ನ ಕೇಳಿದ್ರು, “ಅಲ್ಲೂ ಇಲ್ಲೂ ಎರಡೂ ಕಡೆ ಈ ಪರಿ ಬ್ಯಾಟಿಂಗ್ ಮಾಡ್ತೀಯ… ಸ್ಟ್ಯಾಮಿನಾ ಎಲ್ಲಿರುತ್ತೋ?” ಮಂಜ ನಗುತ್ತ, “ಬ್ಯಾಟಿಂಗ್ ನೆನೆಸ್ಕೊಂಡ್ರೇ ಸ್ಟ್ಯಾಮಿನಾ ಉಕ್ಕೇರುತ್ತೆ ಗೊತ್ತಾ?” ಅಂದಾಗ ನಾನು ತಲೆ ಆಡಿಸಿದೆ. ಅವನು ಒಂದು ಕುಟ್ಟಿ, “ಏನು ತಲೆ ಆಡಿಸ್ತೀಯ. ಇವತ್ತು ರಾತ್ರಿ ನಿಂಗೂ ಬ್ಯಾಟಿಂಗ್ ಕೊಡ್ತೀವಿ ಹೆದರಬೇಡ” ಅಂದ. ನನಗೆ ಒಂದೂ ಅರ್ಥವಾಗಲಿಲ್ಲ. ಬೆಳಗಿಂದ ಆಟವಾಡಿ, ಈಗ ತನೆ ಹೊಟ್ಟೆ ಬಿರಿಯ ತಿಂದು, ಮತ್ತೆ ಬ್ಯಾಟಿಂಗು ಅಂದ್ರೆ!?

ಅವರ ಮಾತುಗಳು ಮುಂದುವರಿದಂತೆ ಗೊತ್ತಾಗುತ್ತ ಹೋಯಿತು. ಅವರ ಬ್ಯಾಟಿಂಗ್ ಪಿಚ್ ಯಾವುದು ಅಂತ! ನಾನು ಕೆಟ್ಟದಾಗಿ ಸಿಕ್ಕಿಹಾಕಿಕೊಂಡೆ. ನನಗೆ ಇನ್ನೂ ಮರೆತಿಲ್ಲ. ಅದು ರೂಂ. ನಂ. ೪೦೭. ಮುಖದ ತುಂಬ ಪೌಡರು ಮೆತ್ತಿ, ಕೆಂಪು ಲಿಪ್ ಸ್ಟಿಕ್ಕು ಬಳಕೊಂಡಿದ್ದ ಹುಡುಗಿಬ್ಬಳು ಒಳಗೆ ಕುಳಿತಿದ್ದಳು. ತಲೆ ತುಂಬ ಸೇವಂತಿಗೆ ಹೂವು, ಸಾಮಾನ್ಯವಾದೊಂದು ಸೀರೆ. ನನ್ನ ಬ್ಯಾಟಿಂಗ್ ಕ್ಷೇತ್ರ!

art_modern_art-merello_transparent_portrait.jpg

ಟೀಮಿನ ಹುಡುಗರು ನನಗೆ ಪಾಠ ಮಾಡಿಯೇ ಕಳಿಸಿಕೊಟ್ಟಿದ್ದರು. ಪೋಲಿಪೋಲಿ ಮಾತುಗಳು ಇನ್ನೂ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದವು. ಆದರೆ ಆಕೆಯನ್ನ ನೋಡುತ್ತಿದ್ದ ಹಾಗೇ ಎಲ್ಲವೂ ಮರೆತುಹೋದವು. ತಲೆ ತಗ್ಗಿಸಿಯೇ ಟೀವಿ ಹಾಕಿಕೊಂಡು ಕುಳಿತೆ. ಪುಟ್ಟಪುಟ್ಟ ಮಕ್ಕಳು ಎದೆತುಂಬಿ ಹಾಡ್ತಿದ್ರು.

ಐದು ಹತ್ತು ನಿಮಿಷ ಆಗಿತ್ತೇನೋ? ಆ ಹುಡುಗಿಗೂ ಅಸಹನೆ ಶುರುವಾಗಿರಬೇಕು. “ನನ್ನೇನು ನಿನ್ ಹೆಂಡ್ತಿ ಅಂದ್ಕೊಂಡ್ಯಾ? ಬೇಗ ಬೇಗ ಮುಗ್ಸು. ನೀನೊಬ್ನೇ ಸಾಕಾಗಲ್ಲ ನಂಗೆ!” ಅಂತ ಒರಟೊರಟಾಗಿ ಅಂದಳು.
“ಸಾಕಾಗಲ್ಲ ಅಂದ್ರೆ!?” ನಾನು ಅದುಹೇಗೆ ಬಾಯ್ಬಿಟ್ಟೆನೋ ಗೊತ್ತಿಲ್ಲ. ಅವಳ ದನಿಯಲ್ಲಿ ತಿರಸ್ಕಾರ, ಹತಾಶೆ, ನೋವು, ವಾಂಛೆ ಏನೇನೋ ಭಾವಗಳ ಮಿಶ್ರಣ, “ನೀ ಕೊಡೋ ಜುಜುಬಿ ಇನ್ನೂರು ರೂಪಾಯಿಗೆ ಕರ್ಚಿಪ್ಪು -ಬ್ರಾ ಕೂಡಾ ಬರಲ್ಲ. ಇನ್ನು ಸಂಸಾರ ಮಾಡೋದು ಹೇಗೆ ನಾನು?”

ಯಾಕೋ ಹೊಟ್ಟೆ ಕಿವುಚಿದಂತಾಯ್ತು. ಅವಳ ಮುಖ ಕೂಡ ಸರಿಯಾಗಿ ನೋಡದೆ ಅವಳು ಕುಳಿತಿದ್ದ ಮಂಚದ ತುದಿಯಲ್ಲಿ ಇನ್ನೂರು ರೂಪಾಯಿ ಇಟ್ಟು ಎದ್ದು ಹೊರಬಂದೆ. ಸೋಫಾದ ಮೇಲೆ ಹೊರಳಾಡಿ ಮೈ ನೋಯಿತೇ ಹೊರತು ನಿದ್ದೆ ಬರಲಿಲ್ಲ. ಮತ್ತೆ ಮತ್ತೆ ಬ್ಯಾಟಿಂಗ್ ಮಾಡೋ ಗಂಡಸರಿಂದಲೇ ಹೆಣ್ಣು ಮೈದಾನವಾದಳಾ? ಈ ಮೈ’ದಾನ’ದ ಹೆಣ್ಣುಗಳಿಗೆ ಎಂದಾದರೂ ಮದುವೆಯಾಗುತ್ತಾ? ಅಥವಾ ಇವರು ಈಗಾಗಲೇ ಮದುವೆ ಆಗಿ ನೊಂದು, ಹೊಟ್ಟೆಪಾಡಿಗೆ ಈ ಹಾದಿ ತುಳಿದವರಾ?
ಗಂಡನ ತೋಳತೆಕ್ಕೆಯಲ್ಲಿ ನುಲಿಯುತ್ತಾ ನಾನು ಇವತ್ತು ಕೆಲಸಕ್ಕೆ ಹೋಗಲ್ಲ ಅಂತ ಮೊಂಡಾಟ ಮಾಡೋ ಭಾಗ್ಯ ಅವರಿಗಿರತ್ತಾ? ಅಥವಾ ಜೀವನವಿಡೀ ಕಂಡಕಂಡವರ ತೋಳ ಹಸಿವಿಗೆ ಮೈಚಾಚೋದೇ ಅವರ ಕಾಯಕವಾಗಿಹೋಗತ್ತಾ?
ಹೀಗೇ… ಏನೇನೋ ಯೋಚನೆಗಳು…

ಈ ಪ್ರಶ್ನೆಗಳನ್ನೆಲ್ಲ ಅವಳ ಹತ್ತಿರವೇ ಕೇಳಲೇ ಅಂದುಕೊಂಡೆ. ಧೈರ್ಯ ಸಾಕಾಗಲಿಲ್ಲ. ಎಷ್ಟೆಂದರೂ ಆಡದ ನಾಯಕನಲ್ಲವೇ ನಾನು? ಬಿಡಿ. ಇಂಥ ಆಟ ಆಡೋದಕ್ಕಿಂತ ಆಡದಿರೋದೇ ಲೇಸು!

ಯೋಚಿಸುತ್ತಿರುವಾಗಲೇ ಮಂಜ ಹೊರಬಂದ. ನನ್ನ ಮುಖ ನೋಡಿಯೇ ಎಲ್ಲ ತಿಳಿದವನಂತೆ- “ಏನೋ ಇಷ್ಟ್ ಬೇಗ ಬಂದ್ಬಿಟ್ಟಿದೀ? ರಿಟೈರ್ಡ್ ಹರ್ಟಾ?” ಅಂದ. “ನೀನು ಗಂಡಸೇ ಅಲ್ಲ ಬಿಡು” ಅಂತಲೂ ಸೇರಿಸಿದ.
ನನ್ನ ಗಂಡೆದೆಯೊಳಗೂ ಹೆಣ್ಣು ಮನಸಿದೆ ಕಣೋ ಅನ್ನಬೇಕು ಅನಿಸ್ತು. ಹೆಣ್ಣನ್ನ ಭೋಗಿಸೋದೊಂದು ಆಟ ಅಂದ್ಕೊಂಡವನಿಗೆ ಅದೆಲ್ಲ ಅರ್ಥವಾಗದು ಅನಿಸಿ ಬಾಯ್ಮುಚ್ಚಿಕೊಂಡೆ.

“ಹಾಳು ಗಂಡಸರು!” ಹಾಗಂತಾರೆ ಹೆಣ್ಣುಮಕ್ಕಳು. “ಹಾಗೆ ’ಹಾಳು’ ಅಲ್ಲದವರು ಗಂಡಸರೇ ಅಲ್ಲ” ಅಂತಾರೆ ಗಂಡಸರು. ಹೀಗೆ ಗಂಡಸಾಗೋದಕ್ಕಿಂತ ಆಗದಿರೋದೇ ಒಳ್ಳೆಯದೆನಿಸಿತು. ಅವನ ಮೇಲೆ ಜಿಗುಪ್ಸೆ ಬಂದಂತಾಗಿ ಅಲ್ಲಿಂದೆದ್ದು ಹೊರಟೆ. ಹೊಟ್ಟೆ ತುಂಬಿಸಲಿಕ್ಕೆ ಮೈಮಾರಲು ಬಂದಿದ್ದ ಆ ಹುಡುಗಿ ಈಗ ಯಾರ ಮೈದಾನವೋ? ಯೋಚಿಸುತ್ತ ಉಳಿದೆ.