Archive for ಜನವರಿ, 2008

ಭಾಗವತ ಪುರಾಣದಲ್ಲಿ ಮಹಾರಾಜ ನಭಗ ಮತ್ತವ ಮಗ ನಾಭಾಗನ ಕಥೆಯೊಂದು ಬರುತ್ತೆ.
ಅದು ಹೀಗಿದೆ.

ಮಹಾರಾಜ ನಭಗ, ನಾಭಾ ಹೆಸರಿನ ಮನುವಿನ ಪುತ್ರ. ಈ ನಭಗನ ಪುತ್ರರಲ್ಲೊಬ್ಬನಾದ ನಾಭಾಗ ದೀರ್ಘ ಕಾಲದವರೆಗೆ ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಿದ್ದ. ಈ ಕಾಲದಲ್ಲಿ ಅವನ ಹಿರಿಯ ಸಹೋದರರು ನಾಭಾಗನು ಇಷ್ಟು ವರ್ಷವಾದರೂ ಮರಳಿಬಾರದಿದ್ದುದರಿಂದ ಆತನೆಲ್ಲೋ ಸಂನ್ಯಾಸಿಯಾಗುವ ವ್ರತ ಕೈಗೊಂಡಿರಬೇಕೆಂದು ತಿಳಿದು, ರಾಜ್ಯದಲ್ಲಿ ಅವನಿಗೆ ಪಾಲು ಕೊಡಬೇಕೆನ್ನುವುದನ್ನು ಪರಿಗಣಿಸದೆ ತಮ್ಮ ತಮ್ಮಲ್ಲೆ ಹಂಚಿಕೊಂಡುಬಿಟ್ಟರು. ನಾಭಾಗ ಹಿಂದಿರುಗಿದಾಗ ತಮ್ಮ ತಂದೆಯನ್ನೇ ಅವನ ಪಾಲಿನ ಆಸ್ತಿ ಎಂದು ಅವನ ಜೊತೆಯಲ್ಲಿ ನಭಗನನ್ನು ಕಳುಹಿಸಿಕೊಟ್ಟರು.

ತನ್ನ ಕಣ್ಣೆದುರೇ ನಾಭಾಗನನ್ನು ವಂಚಿಸಿದ ತನ್ನ ಮಕ್ಕಳ ಬಗ್ಗೆ ನಭಾಗನಿಗೆ ಬೇಸರವಾಯಿತು. ಅವನ ಮೇಲಿನ ಕರುಣೆಯಿಂದ ಎರಡು ವಿಶೇಷ ಮಂತ್ರಗಳನ್ನು ಅವನಿಗೆ ನೀಡಿ, “ಅಂಗೀರನ ವಂಶಸ್ಥರು ಈಗೊಂದು ಮಹಾ ಯಜ್ಞವನ್ನು ಕೈಗೊಂಡಿರುವರು. ಅವರೆಷ್ಟೇ ಬುದ್ಧಿಶಾಲಿಗಳಾಗಿದ್ದರೂ ಯಾಗದ ಪ್ರತಿ ಆರನೇ ದಿನ ಭ್ರಾಂತರಾಗಿ ಮಂತ್ರವನ್ನು ತಪ್ಪು ತಪ್ಪಾಗಿ ಹೇಳುವರು. ಆ ಸಮಯದಲ್ಲಿ ನೀನು ಅಲ್ಲಿ ಉಪಸ್ಥಿತನಿದ್ದು ಅದನ್ನು ಸರಿಪಡಿಸು. ತುಷ್ಟರಾಗುವ ಅವರು ಯಜ್ಞದ ನಂತರ ಉಳೀಯುವ ಸಂಪತ್ತನ್ನು ನಿನಗೆ ನೀಡುವರು” ಎಂದು ಸೂಚಿಸಿದನು.

ಅದರಂತೆ ನಾಭಾಗನು ಯಜ್ಞ ಶಾಲೆಗೆ ಹೋಗಿ ವೈಶ್ವದೇವನನ್ನು ಕುರಿತ ಮಂತ್ರಗಳನ್ನು ಪಟಿಸಿದನು. ಅಂಗೀರ ವಂಶಸ್ಥರು ಅವನಿಗೆ ಉಳಿದ ಸಂಪತ್ತನ್ನು ನೀಡುತ್ತಿರುವಾಗ ಉತ್ತರ ದಿಕ್ಕಿನಿಂದ ಕಪ್ಪು ಬಣ್ಣದ ವ್ಯಕ್ತಿಯೊಬ್ಬ ಅಲ್ಲಿಗೆ ಬಂದು, “ ಈ ಯಜ್ಞ ಸ್ಥಳದ ಎಲ್ಲ ಸಂಪತ್ತೂ ನನಗೆ ಸೇರಬೇಕು” ಎಂದು ತಡೆದನು.

ಕೊನೆಗೆ ಅವರಿಬ್ಬರೂ ವ್ಯಾಜ್ಯ ಪರಿಹಾರಕ್ಕಾಗಿ ನಭಗನನ್ನು ಆಶ್ರಯಿಸಿದರು. ನಡೆದ ಎಲ್ಲವನ್ನೂ ಕೂಲಂಕಷವಾಗಿ ವಿಚಾರಿಸಿದ ಆತನು ಯಜ್ಞ ನಡೆಸುವಾಗ ಋಷಿಗಳು ಎಲ್ಲ ಸಂಪತ್ತನ್ನೂ ಅದಾಗಲೇ ಶಿವನಿಗೆ ಅರ್ಪಿಸಿದ್ದನ್ನು ಮನಗಂಡನು. ಅದರಂತೆ, ಆ ಎಲ್ಲವನ್ನು ಆತನಿಗೇ ಅರ್ಪಿಸುವಂತೆ ಮಗನಿಗೆ ಹೇಳಿದನು. ಆ ಕಪ್ಪು ಬಣ್ಣದ ವ್ಯಕ್ತಿಯು ಶಿವನೇ ಆಗಿರಲು, ಸಹರ್ಷದಿಂದ ನಾಭಾಗನು ಸಂಪತ್ತನ್ನು ಶಿವನಿಗೆ ಅರ್ಪಿಸಿ ಕರುಣೆಗಾಗಿ ಯಾಚಿಸಿದನು.

ನಾಭಾಗನ ಸದ್ವರ್ತನೆಯಿಂದ ಸಂತಸಗೊಂಡ ಪರಶಿವ ಆತನ ಮೇಲೆ ಕೃಪೆದೋರಿ ಅದನ್ನು ಆತನಿಗೇ ಮರಳಿಸಿ, ಜೊತೆಗೆ ದಿವ್ಯ ಜ್ಞಾನವನ್ನೂ ಕರುಣಿಸಿ ಅಂತರ್ಧಾನನಾದನು.

– ಈ ಕಥೆ, ಭಾಗವತದ ೯ನೇ ಸ್ಕಂಧ, ೪ನೇ ಅಧ್ಯಾಯದಲ್ಲಿ ಬರುತ್ತದೆ. ಸಾತ್ತ್ವಿಕ ಮನಸ್ಸು, ಹಿರಿಯರ ಮಾತಿನಲ್ಲಿ ಗೌರವವಿರುವ ಯಾವ ವ್ಯಕ್ತಿಯೇ ಆದರೂ ವಿಶೇಷ ಕೃಪೆಗೆ ಪಾತ್ರನಾಗುತ್ತಾನೆ ಎನ್ನುವುದು ಈ ಕಥೆಯ ತಿರುಳು.

ಕ್ಯೋಟೋ ರಾಜ್ಯಪಾಲನೊಬ್ಬನಿಗೆ ಒಮ್ಮೆ ಝೆನ್ ಮಹಾಗುರು ಕೆಯಿಚುವನ್ನು ಭೇಟಿ ಮಾಡುವ ಮನಸ್ಸಾಯಿತು. ತೊಫುಕು ದೇವಾಲಯದಲ್ಲಿ ಉಪದೇಶ ಮಾಡುತ್ತಿದ್ದ ಕೆಯಿಚುವಿಗೆ ಆತ ಹೊರಗಿನಿಂದ ತನ್ನ ಗುರುತಿನ ಚೀಟಿ ಕಳಿಸಿದ. ಅದರಲ್ಲಿ ಹೀಗೆ ಬರೆದಿತ್ತು; ಕಿಟಾಗಕಿ, ಕ್ಯೋಟೋ ರಾಜ್ಯಪಾಲ.
ಅದನ್ನೋದಿದ ಕೆಯಿಚು, “ಇವರೊಂದಿಗೆ ನನಗೇನು ಕೆಲಸ? ನಾನು ಇವರನ್ನ ಭೇಟಿಯಾಗೋದಿಲ್ಲ” ಎಂದು ಚೀಟಿಯನ್ನು ವಾಪಸು ಕಳಿಸಿಬಿಟ್ಟ.
ಸೇವಕ ತಲೆ ತಗ್ಗಿಸಿ ನಿಂತು ರಾಜ್ಯಪಾಲನಿಗೆ ವರದಿ ಒಪ್ಪಿಸಿದ. ಈಗ ಆತ ಚೀಟಿ ತೆಗೆದುಕೊಂಡು ’ಕ್ಯೋಟೋ ರಾಜ್ಯಪಾಲ’ ಎನ್ನುವ ಪದಗಳಿಗೆ ಕಾಟೂ ಹಾಕಿ ಮತ್ತೆ ಕಳಿಸಿಕೊಟ್ಟ.
ಸೇವಕ ನೀಡಿದ ಚೀಟಿಯನ್ನು ನೋಡಿದ ಮಹಾಗುರು, “ಓ, ನಾನು ಕಿಟಾಗಕಿಯೊಂದಿಗೆ ಮಾತನಾಡೋದಿದೆ. ಅವರನ್ನ ಬರಹೇಳು” ಅಂದ!

ಒಂದೂರಲ್ಲಿ ಒಬ್ಬ ಅಗಸ ಇದ್ದ. ಅವನ ಹೆಸ್ರು ಬಸ್ಯ. ಅವನ ಸಂಗಾತಿ ಸಿಂಗ, ಅವನ ನೆಚ್ಚಿನ ಕತ್ತೆಯೇ ಆಗಿತ್ತು. ಯಾವಾಗ್ಲೂ ಬಸ್ಯನ ಹಿಂದೆ ಸಿಂಗ, ಸಿಂಗನ ಮುಂದೆ ಬಸ್ಯ ಇರ್ಲೇಬೇಕು. ಹಾಂಗಿತ್ತು ಅವರ ದೋಸ್ತಿ.
ಒಂದಿನ ಬಸ್ಯ ಮತ್ತು ಸಿಂಗ ಅದೆಲ್ಲಿಗೂ ದೂರದೂರಿಗೆ ಹೊರಟ್ರು. ಹೋಗ್ತಾ ಹೋಗ್ತಾ ಕತ್ಲಾಯ್ತಾ, ಸರಿ. ಒಂದ್ ಮರದ್ ಕೆಳಗೆ ಅಡ್ಡದ್ರು. ಸಿಂಗ ತನ್ ಯಜಮಾನನ್ನ ಒಂದ್ ಕಥೆ ಹೇಳು, ಒಂದ್ ಕಥೆ ಹೇಳು ಅಂತ ಪೀಡಿಸ್ದ. ಆದ್ರೆ ಅಗಸಂಗೆ ಅದಾಗ್ಲೇ ಕಣ್ಣು ಕುಗುರ್ತಿತ್ತು. ಸಿಂಗನ ಹಟಕ್ಕೆ ಜಗ್ಗದೆ ಅಂವ ಹಾಗೇ ನಿದ್ದೆ ಹೋದ.

ಹೀಗೆ ಅಗಸ ಗಾಢ ನಿದ್ದೆಯಲ್ಲಿದ್ದಾಗ ಅವನ ಹೊಟ್ಟೇಲಿದ್ದ ನಾಲ್ಕು ಕಥೆಗಳು ಎದ್ದು ಬಂದು ಅವನ ಮೈಮೇಲೆ ಕೂತ್ಕೊಂಡ್ವು. ಕೂತು ಮಾತಾಡ್ಲಿಕ್ ಶುರು ಮಾಡಿದ್ವು. ಅವಕ್ಕೆ ತುಂಬ ಕೋಪ ಬಂದಿತ್ತು. “ ಅಲ್ಲ, ಚಿಕ್ಕಂದಿಂದ್ಲು ಈ ಅಗಸಂಗೆ ನಮ್ ವಿಷಯ ಚೆನ್ನಾಗ್ ಗೊತ್ತಿದೆ. ಆದ್ರೂ ಯಾರಿಗೂ ಇವ್ನು ನಮ್ ಬಗ್ಗೆ ಹೇಳೋಲ್ವಲ್ಲ ಯಾಕೆ? ಮತ್ಯಾಕೆ ನಾವು ಅವ್ನ ಹೊಟ್ಟೇಲಿರ್ಬೇಕು? ನಾವು ಅವನನ್ನ ಕೊಂದು ಬೇರೆಲ್ಲಿಗಾದ್ರೂ ಹೊರಟ್ ಹೋಗೋಣ” ಅಂತ ಮಾತಾಡ್ಕೊಂಡ್ವು. ಅವರ ಮಾತು ಸಿಂಗನಿಗೆ ಕೇಳಿಸ್ಬಿಡ್ತು. ಮುಂದೇನು ಮಾತಾಡ್ತಾರೋ ಅಂತ ನಿದ್ದೆ ನಟಿಸ್ತ ಅವುಗಳ ಮಾತನ್ನ ಕಿವಿಕೊಟ್ಟು ಕೇಳಿಸ್ಕೊಂಡ. ಮೊದಲ ಕಥೆ ಹೇಳ್ತು. “ಈ ಅಗಸ ಬೆಳಗ್ಗೆ ಎದ್ದು ಬುತ್ತಿ ಬಿಚ್ಚಿ ತಿನ್ನೋಕೆ ಕೂರ್ತಾನಲ್ಲ, ಆಗ ನಾನು ಮುಳ್ಳಾಗಿ ತುತ್ತಿನೊಳಗೆ ಸೇರ್ಕೊಂಡು ಅವನ ಗಂಟಲಿಗೆ ಚುಚ್ಚಿ ಕೊಲ್ತೇನೆ”. “ಒಂದು ವೇಳೆ ಅಂವ ಸಾಯದಿದ್ರೆ ನಾನು ಇದೇ ಮರದೊಳಗೆ ಸೇರ್ಕೊಂಡು ಅವನ ಮೇಲೆ ಬಿದ್ದು ಸಾಯಿಸ್ತೇನೆ” ಅಂತು ಎರಡನೆ ಕಥೆ. ಮೂರನೆಯದು, “ನಿಮ್ಮಿಬ್ಬರ ಕೈಲಿ ಆಗದಿದ್ರೆ ನಾನು ಇಲ್ಲೇ ಹತ್ತಿರ ಇರೋ ಆ ಹುತ್ತದಲ್ಲಿ ಹಾವಾಗಿ ಕಾದು ಕೂತು ಅವನನ್ನ ಕಚ್ತೀನೆ” ಅಂತು. ಕೊನೆಗೆ ನಾಲ್ಕನೇ ಕಥೆ, ಈ ಯಾವುದ್ರಿಂದ್ಲೂ ಅಂವ ಸಾಯ್ದೆ ಹೋದ್ರೆ, ಅಂವ ಹೊಳೆ ದಾಟ್ತಾನಲ್ಲ, ಆಗ ದೊಡ್ಡ ತೆರೆಯಾಗಿ ಬಂದು ಅವನನ್ನ ಕೊಚ್ಕೊಂಡು ಹೋಗ್ತೀನಿ” ಅಂತ ಹೇಳ್ತು.
ಅವುಗಳಲ್ಲಿ ಒಂದು ಕಥೆಗೆ ತಮ್ಮ ಮಾತನ್ನ ಯಾರಾದ್ರೂ ಕೇಳಿಸ್ಕೊಂಡ್ರೆ ಅನ್ನೋ ಅನುಮಾನ ಬಂತು. ನಾಲ್ಕೂ ಕಥೆಗಳು ಸೇರಿ, ಯಾರಾದ್ರೂ ಅಗಸನಿಗೆ ತಮ್ಮ ಮಾತುಗಳ್ನ ತಿಳಿಸಿದ್ರೆ ಅವ್ರು ಕಲ್ಲಾಗ್ತಾರೆ ಅಂತ ಶಾಪ ಕೊಟ್ವು.

ಬೆಳ್ಗಾಯ್ತು. ಹತ್ರ ಇದ್ದ ನದೀಲಿ ಮುಖ ತೊಳ್ಕೊಂಡ್ ಬಂದ ಅಗಸ ಬುತ್ತಿ ಬಿಚ್ಚಿ ತಿನ್ನೋಕೆ ಕೂತ. ಆಗ ಸಿಂಗ ಓಡಿ ಬಂದವ್ನೇ ತನ್ನ ಮೂತಿಯಿಂದ ಅನ್ನದ ಬಟ್ಟಲನ್ನ ತಳ್ಳಿ ಚೆಲ್ಲಿಬಿಟ್ಟ. ಸಿಟ್ಟಿಗೆದ್ದ ಅಗಸ ಇನ್ನೇನು ಹೊಡೀಬೇಕು ಅನ್ನುವಾಗ ಅವಂಗೆ ಚೆಲ್ಲಿದ ಅನ್ನದಲ್ಲಿ ಮುಳ್ಳುಗಳಿರೋದು ಕಾಣಿಸ್ತು.
ಈ ಸಂಗತಿಯಿಂದ ತಲೆಕೆಟ್ಟ ಅಗಸ ಇನ್ನೇನು ಸುಧಾರಿಸ್ಕೊಳ್ಬೇಕು ಅನ್ನುವಾಗ ಇದ್ದಕ್ಕಿದ್ದಹಾಗೇ ಓಡಿಬಂದ ಸಿಂಗ ತನ್ನ ಯಜಮಾನನ ಪಂಚೆ ಹಿಡಿದು ಎಳೆದು ಎಳೆದೂ ಎಲ್ಲಿಗೋ ಕರೆಯತೊಡಗಿದ. ಅಗಸನೂ ಸಿಟ್ಟಿಗೆದ್ದು ಹೊರಟ. ಇನ್ನೇನು ಅಂವ ಮರದ ಬುಡದಿಂದ ಎದ್ದಿರಬೇಕು, ಧೊಪ್ಪೆಂದು ಬಿದ್ದ ಸದ್ದು!
ಸರಿ. ಅಗಸ ಇನ್ನು ಅಲ್ಲಿಂದ ಹೊರಡೋದೇ ವಾಸಿ ಅಂದುಕೊಂಡ. ತನ್ನ ಬಟ್ಟೆಗಂಟು ಸರಿಂಆಡಿಕೊಳ್ಳತೊಡಗಿದ. ಅಲ್ಲೇ ಹತ್ತಿರವಿದ್ದ ಹುತ್ತದಿಂದ ಹಾವು ಹೊರಬಂತು. ಅದನ್ನೇ ಕಾಯ್ತಿದ್ದ ಸಿಂಗ, ತನ್ನ ಗೊರಸಿಂದ ಅದನ್ನ ತುಳಿತುಳಿದು ಕೊಂದು ಹಾಕಿದ.
ಅಗಸ ’ಭಲಾ’ ಅಂತ ಬೆನ್ನು ನೇವರಿಸಿ ಹೊಳೆಯತ್ತ ಹೊರಟ. ಅಲ್ಲೂ ಭಾರೀ ತೆರೆ ಬರೋದನ್ನ ನೋಡಿದ ಸಿಂಗ, ಯಜಮಾನನ್ನ ಬೆನ್ನ ಮೇಲೆ ಕೂರಿಸ್ಕೊಂಡು ಆಚೆ ದಡಕ್ಕೆ ಕರೆದೊಯ್ದ.

ಅಷ್ಟೂ ಹೊತ್ತು ಸುಮ್ಮನಿದ್ದ ಅಗಸ ಸಮಾಧಾನವಾದ ಮೇಲೆ ಸಿಂಗನ್ನ ಕೇಳ್ದ.“ ಪ್ರತಿ ಸಾರ್ತಿ ನೀನು ನನ್ ಜೀವ ಉಳಿಸ್ತಲೇ ಬಂದಿದೀಯ. ನಿಂಗೆ ನನ್ ವಿಷ್ಯ ಏನೋ ಗೊತ್ತಾಗಿದ್ದೆ. ಏನದು ಹೇಳು?”
ಊಹೂಂ… ಸಿಂಗ ಬಾಯಿ ಬಿಗಿದ್ಕೊಂಡು ನಿಂತುಬಿಟ್ಟ. ಅಗಸ ಪೀಡಿಸಿ ಪೀಡಿಸಿ ಕೇಳಿದಾಗ, ‘ಅದನ್ನ ಹೇಳಿದ್ರೆ ನಾನು ಕಲ್ಲಾಗಿಹೋಗ್ತೀನಿ’ ಅಂದ. ಆದ್ರೂ ಅಂವ ಬಿಡಲಿಲ್ಲ. ಹೇಳಲೇಬೇಕು ಅಂತ ಹಟ ಹಿಡಿದ. ಕೊನೆಗೆ ಸಿಂಗ ಕಥೆಗಳ ಮಾತನ್ನ ಹೇಳಿದ. ಹೇಳಿ ಮುಗೀತಲೇ ನಿಂತಲ್ಲಿ ಕಲ್ಲಾಗಿಹೋದ!

ನಾಲ್ಕು ನಾಲ್ಕು ಸಾರ್ತಿ ಜೀವ ಉಳಿಸಿದ ತನ್ನ ಪ್ರೀತಿಯ ಭಂಟ ಹಾಗೆ ನಿಜವಾಗಿಯೂ ಕಲ್ಲಾಗಿದ್ದು ನೋಡಿ ಕಣ್ಣೀರು ಸುರಿಸಿದ ಅಗಸ, ಆ ಕಲ್ಲಿನ ಮೇಲೆ ಬಟ್ಟೆ ಒಗೆಯೋದನ್ನ ರೂಢಿಸ್ಕೊಂಡ. ಹೀಗೆ ಸದಾ ತನ್ನ ಸಂಗಾತಿ ಜೊತೆ ಇರುವ ಸಮಾಧಾನ ಅವನದಾಗ್ತಿತ್ತು. ಮುಂದೆ ಊರಿನ ಜನ, ಹೊಳೆ ಹತ್ತಿರದ ಆ ಕಲ್ಲನ್ನ ‘ಅಗಸನ ಕಲ್ಲು’ ಅಂತ್ಲೇ ಕರೆದರು.

ಹೆಲೋ!

ನಾವು ಇವತ್ತು ತಾನೇ ಇಂಥದೊಂದು ಪೋಸ್ಟ್ ಹಾಕಬೇಕು ಅಂತ ಡಿಸೈಡ್ ಮಾಡಿದ್ವಿ. ಅಷ್ಟರಲ್ಲೇ ಟೀನಾ ಮುದ್ದಾಗಿ ಗದರಿಬಿಟ್ಟಿದ್ರು!

ಇರಲಿ. ಜೀವದನಿ ಮತ್ತೆ ತನ್ನ ಸದ್ದು ಕೇಳಿಸ್ಲಿಕ್ಕೆ ತಯಾರಾಗ್ತಾ ಇದೆ.
ಆದ್ರೆ, ಈ ಸಾರ್ತಿ ನಮ್ಮ ಥೀಮ್ ನಲ್ಲಿ ಕೊಂಚ ಬದಲಾವಣೆ. ನಿಮ್ಮನ್ನ ಹಾಗೇ ಕೂರಿಸ್ಕೊಂಡು ಒಂದಷ್ಟು ಕಥೆಗಳನ್ನ ಹೇಳುವಾ ಅಂತ! ಹಾಗೇ ಹಳೆಯ ’ಗಂಡಸ್ರ ಗೋಳು’ ಮುಂದುವರೆಯಲಿದೆ. ಉಳಿದ ಕಾಲಂ ಲೇಖಕರೆಲ್ಲ ಕೈ ಕೊಟ್ಟು ಬಿಟ್ಟಿದಾರೆ! ಹೀಗಾಗಿ, ಹಳೆಯ ಇನ್ಯಾವ ಕ್ಯಟಗರಿಯೂ ಇನ್ನು ಇರೋಲ್ಲ. ಕವಿತೆ, ಅನುವಾದಗಳು ಆಗೀಗ ಹಣಕಬಹುದಷ್ಟೆ!
ನಾವೆಲ್ಲ ಬೆಳೀವಾಗ ಅದೆಷ್ಟು ಕಥೆಗಳನ್ನ ಕೇಳಿಲ್ಲ, ಅದೆಷ್ಟು ಕಥೆ ಕಟ್ಟಿ ಹೇಳಿಲ್ಲ!? ಇವತ್ತಿನ ಧಾವಂತದಲ್ಲಿ ಅವೆಲ್ಲ ಮರೆತೇಹೋಗ್ಬಿಟ್ಟಿದೆ ಅಲ್ವಾ?
ಅದ್ಕೇ ನಾವೀಗ ಅಂಥ ಕಥೆಗಳನೆಲ್ಲ ಗುಡ್ಡೆ ಮಾಡ್ಕೊಂಡು ಕೂತಿದೀವಿ. ನೀವೂ ಇದರಲ್ಲಿ ಸಾಥ್ ಕೊಡ್ತೀರ?

ನಾವು ಇವನ್ನೆಲ್ಲ ಹೇಳಬೇಕೂಂತ ಇದೀವಿ…

ಪುರಾಣಗಳ ಸಾವಿರ ಸಾವಿರ ಹೆಂಡತಿಯರ ರಾಜ, ಸಾವಿರ ಕೈಗಳ ವೀರ, ಮೈಯೆಲ್ಲ ಕಣ್ಣಿನ ದೇವೇಂದ್ರ, ಲಕ್ಷ ಲಕ್ಷ ವರ್ಷಗಟ್ಟಲೆ ಬಾಳಿದ, ರಾಜ್ಯವಾಳಿದ ಅರಸರು!! ಒಂದಕ್ಕಿಂತ ಒಂದು ರಸಕವಳದಂಥ ಕಥೆಗಳು.
ಜೊತೆಗೆ, ಬಾಯಿಂದ ಬಾಯಿಗೆ ಹರಿಯುತ್ತ ಹೊಸಹೊಸ ರೂಪ, ಆಯಾಮ ಪಡೆದುಕೊಳ್ತಾ ನಮ್ಮನ್ನ ಬೆರಗಿಗೆ ನೂಕೋ ಜಾನಪದ ಕಥೆಗಳು…
ನಮ್ಮ ದೇಶದಲ್ಲಿ ಆಗಿಹೋದ ಮಹಾಮಹಾತ್ಮರ ಕಥೆಗಳು….

ಹೆದರಿಕೊಳ್ಬೇಡಿ, ಎಲ್ಲ ಪುಟಾಣಿ ಪುಟಾಣಿಯಾಗೇ ಇರುತ್ತೆ!
ಹೇಳೋಕೆ ನಾವ್ ರೆಡಿ. ಕೇಳೋಕೆ ನೀವ್ ರೆಡೀನಾ?

ನಲ್ಮೆ,

ಜೀವದನಿ ಬಳಗ