ರಾಮನನ್ನು ರಾಮಾಯಣವನ್ನು ಹಳಿಯುವವರಿಗೆ ಯಾವ ಬಗೆಯಿಂದ ಗೂಡಾರ್ಥಗಳನ್ನ ವಿಶ್ಲೇಷಿಸಿ ಹೇಳಿದರೂ ಸಮಾಧಾನವಾಗದು. ಅಂಥವರು ತಮ್ಮ ಕೆಲವು ವಾದಗಳಲ್ಲಿ ‘ಹಾಗೆ ನಡೆದಿದ್ದು’ ಹೌದೆಂದೂ, ಎಂಥಾ ಅನ್ಯಾಯವೆಂದೂ ಬೊಬ್ಬಿಟ್ಟರೆ, ಕೆಲವೆದೆ, ಇಡಿಯ ಕಾವ್ಯವೇ ಕಟ್ಟು ಕಥೆ ಅಂದು ಮೂಗು ಮುರಿಯುತ್ತಾರೆ.
ಆದರೆ ಮಹಾಕಾವ್ಯಗಳನ್ನು ಮೇಲಮೇಲಕ್ಕೆ ಓದಿ, ಅವುಗಳ ಬಗ್ಗೆ ಗೌರವವಿದ್ದೂ ಅರ್ಥೈಸಿಕೊಳ್ಳಲಾಗದೆ ಅನುಮಾನದ ಹುತ್ತ ಕಟ್ಟಿಕೊಂಡು ಒದ್ದಾಡುವ ಸಂಸ್ಕಾರವಂತರೂ ಇರುತ್ತಾರೆ. ಇಂಥವರು ರಾಮನಾಗಲೀ ಕೃಷ್ಣನಾಗಲೀ ಮಾಡಿದ್ದನ್ನು ಅನ್ಯಾಯವೆಂದು ಹೇಳಲಾರರು; ಪ್ರತಿವಾದಿಗಳಿಗೆ ಸಮರ್ಥ ಉತ್ತರ ನೀಡಿ ಸುಮ್ಮ್ಜನಿರಿಸಲೂ ಆರರು.
ನಾನು ಈ ಎರಡನೆ ಸಾಲಿಗೆ ಸೇರಿದ್ದು. ಹಾಗೆ, ಈ ಕಾವ್ಯಗಳ ಪಾತ್ರಗಳಿಗೆ ನನ್ನದೇ ಆದ ಬೇರೆಯೇ ಬಗೆಯ ಚಿಂತನೆಯನ್ನ ಆರೋಪಿಸಿ ಬರೆಯುವುದು ನನ್ನ ಹವ್ಯಾಸವಾದರೂ ಅಂತರಂಗದಲ್ಲಿ ’ನಿಜ’ವಾದ ಸತ್ತ್ವ ಏನು ಎಂಬ ಕುತೂಹಲ ನನ್ನದಿತ್ತು. ಈ ನಿಟ್ಟಿನಲ್ಲಿ ರಾಮಾಯಣದ ಮೂರು ಮುಖ್ಯ ಪ್ರಶ್ನೆಗಳಾದ “ರಾಮ ವಾಲಿಯನ್ನ ಮರೆಯಲ್ಲೇಕೆ ಕೊಂದ?”, ಸೀತಾ ಪರಿತ್ಯಾಗ ಸಮುಚಿತವೇ” ಮತ್ತು ಸಂಬೂಕ ವಧೆ ಎಷ್ಟು ಸರಿ?”- ಇವುಗಳ ಬೆನ್ನು ಹತ್ತಿ ಹೊರಟಿದ್ದೆ. ಕೊನೆಗೆ ಸಮಾಧಾನಕರ ಅಂಶ ಸಿಕ್ಕಿದ್ದು, ಶ್ರೀ ಮಧ್ವಾಚಾರ್ಯರ ಸರ್ವ ಮೂಲ ಗ್ರಂಥಗಳಲ್ಲಿ! ಅದನ್ನ ನೇರಾನೇರ ಓದಿಲ್ಲ ನಾನು. ಅದನ್ನೆಲ್ಲ ಕ್ರೋಢೀಕರಿಸಿ ಮಾಧ್ವ ಮಹಾ ಮಂಡಲದವರು ಮಾಡಿದ ಹೊತ್ತಗಿಯಲ್ಲಿ, ಶ್ರೀ ವಿಶ್ವೇಶ ತೀರ್ಥರ ಪ್ರಸ್ತಾವನೆಯಲ್ಲಿ ಸಿಕ್ಕಿದ್ದು!
ಅಲ್ಲಿ ನೀಡಿರುವ ಉತ್ತರಗಳನ್ನ ( ಶ್ರೀ ವಿಶ್ವೇಶ ತೀರ್ಥರು ಬರೆದಿರುವಂತೆ) ಇಲ್ಲಿ ಯಥಾವತ್ ನಿರೂಪಿಸಲಾಗಿದೆ.
ಶ್ರೀ ರಾಮ ವಾಲಿಯನ್ನು ನೆರವಾಗಿ ನಿಂತು ಬಾಣ ಪ್ರಯೋಗಿಸದೇ ಮರೆಯಲ್ಲಿ ನಿಂತು ವಾಲಿಯನ್ನು ಕೊಂದಿದ್ದು ಸರಿಯೇ?
ವಾಲ್ಮೀಕಿ ರಾಮಾಯಣದಲ್ಲಿ ಶ್ರೀ ರಾಮನು ವಾಲಿಯನ್ನು ಕೊಲ್ಲುವ ನಿರ್ಧಾರ ಮಾಡಿದ್ದರ ಕಾರಣಗಳನ್ನು ಸ್ಪಷ್ಟವಾಗಿ ಹೇಳಲಾಗಿದೆ. ರಾವಣ ಹೆಗೆ ಸೀತಾದೇವಿಯನ್ನು ಅಪಹರಿಸಿದ್ದನೋ ಹಾಗೆಯೇ ವಾಲಿ ಕೂಡ ಸುಗ್ರೀವನ ಹೆಂಡತಿಯ ಮೇಲೆ ಬಲಾತ್ಕಾರವೆಸಗಿ ತನ್ನ ವಶ ಮಾಡಿಕೊಂಡ. ಈ ನಿಟ್ಟಿನಲ್ಲಿ ವಾಲಿ ಕೂಡ ರಾವಣನ ಸಮಾನ ಅಪರಾಧಿ. ಇಂಥಹ ದುರ್ವರ್ತನೆ ತೋರಿದವನನ್ನು ನಿಗ್ರಹಿಸುವುದರಲ್ಲಿ ತಪ್ಪೇನಿದೆ? ಶಕ್ತಿ ಪರೀಕ್ಷೆಗಾಗಿ ನಡೆಸುವ ಯುದ್ಧಗಳಲ್ಲಿ ಕ್ರಿಕೆಟ್ ಮುಂತಾದ ಆಟಗಳಾ ನಿಯಮದಂತೆ ಯುದ್ಧ ನಿಯಮವನ್ನೂ ಚಾಚೂ ತಪ್ಪದೆ ಅನುಸರಿಸಬೇಕು. ಆದರೆ ದುಷ್ಟರನ್ನು, ಅಧಾರ್ಮಿಕರನ್ನು ಶಿಕ್ಷಿಸುವಾಗ ಈ ನಿಯಮಗಳನ್ನು ಅನುಸರಿಸುವ ಅವಶ್ಯಕತೆಯಿಲ್ಲ. ಕಳ್ಳರು, ದರೋಡೆಕಾರರು ಮತ್ತು ಭಯೋತ್ಪಾದಕರನ್ನು ಹಿಡಿಯಲು ಯಾವುದೇ ತಂತ್ರಗಳನ್ನು ಅನುಸರಿಸಿದರೂ ತಪ್ಪೆನ್ನಿಸುವುದಿಲ್ಲವಶ್ಟೆ? ಆದುದರಿಂದ ಅತ್ಯಾಚಾರಿಯಾದ ವಾಲಿಯನ್ನು ರಾಮನು ಮರೆಯಲ್ಲಿ ನಿಂತು ಕೊಂದುದರಲ್ಲಿ ಯಾವುದೇ ನೈತಿಕ ಅಪರಾಧವಿಲ್ಲ. ಈ ಸಮರ್ಥನೆಯನ್ನು ವಾಲ್ಮೀಕಿ ರಾಮಾಯಣದಲ್ಲಿ ನಾವು ನೋದಬಹುದು.
ಇದೇ ವಾಲ್ಮೀಕಿ ರಾಮಾಯಣದಲ್ಲಿ ಮತ್ತೂ ಒಂದು ವಿಶಯವನ್ನು ಗಮನಿಸಬೇಕು. ಅದು, ಧರಾಶಾಯಿಯಾದ ವಾಲಿ ಮತ್ತು ಶ್ರೀರಾಮರ ಚರ್ಚೆ. ರಾಮನೊಂದಿಗೆ ಚರ್ಚಿಸಿದ ವಾಲಿಗೆ ತನ್ನ ತಪ್ಪಿನ ಅರಿವಗಿ ಪಶ್ಚಾತ್ತಾಪ ಪಡುತ್ತಾನೆ. ಆಗ ರಾಮನು ಆತನಿಗೆ ಜೀವದಾನ ನೀಡಿ ಬದುಕಿಸಬಲ್ಲೆ ಎಂದು ಆಹ್ವಾನವಿತ್ತಾಗ, ವಾಲಿ ಅದನ್ನು ನಿರಾಕರಿಸಿ ರಾಮ ಸನ್ನಿಧಿಯಲ್ಲಿ ದಿವ್ಯ ಮರಣವನ್ನು ಅಪೇಕ್ಷಿಸುತ್ತಾ ಶಾಂತನಾಗಿಯೇ ಸಾವನ್ನು ಸ್ವೀಕರಿಸುತ್ತಾನೆ.
ನನಗನ್ನಿಸಿದ್ದು: ನಮಗೆ ರಾಮಾಯಣ ಗೊತ್ತಿರುವುದು ವಾಲ್ಮೀಕಿ ರಾಮಾಯಣದ ಮೂಲಕವೇ. ಆನಂತರದಲ್ಲಿ ಅನೇಕಾನೇಕ ಪ್ರಕ್ಷೇಪಗಳು ಬಂದು ಮೂಲ ರಾಮಾಯಣ ಯಾವುದೆಂದೇ ತಿಳಿಯದಾಗುವ ಪರಿಸ್ಥಿತಿ ಬಂದಿದೆ. ನಾವು ಬೇಕಿದರೆ ನಮ್ಮ ನಮ್ಮ ಚಿಂತನೆಯ ಮೂಲಕ ವಾಲ್ಮೀಕಿ ರಾಮಾಯಣದಿಂದ ಮೂಲ ಪಾತ್ರ ಸನ್ನಿವೇಶಗಳನ್ನು ತೆಗೆದುಕೊಂಡು ಹೊಸತನ್ನು ಹೆಣೆಯೋಣ. ಆದರೆ ಅವಕ್ಕೆ ನಾವು ‘ಇತಿಹಾಸ’ದ ಹಣೆಪಟ್ಟಿ ಕೊದಲಾಅಗ್ದು. ಅದು ಮೂರ್ಖತನ ಕೂಡ. ರಾಮನ ಬಗ್ಗೆ, ರಾಮಾಯಣದ ಬಗ್ಗೆ ಮಾತಾಡುವಾಗ ವಾಲ್ಮೀಕಿ ರಾಮಾಯಣವೊಂದೇ ಮೂಲ, ಪ್ರಮಾಣ. ಹೀಗಾಗಿ ರಾಮ ವಾಲಿಯನ್ನು ಕೊಂದ ಎಂದು ರಾಮಾಯಣದ ಆಧಾರದ ಮೇಲೆ ಹೇಳುವ ನಾವು, ಯಾಕೆ ಹಾಗೆ ಮಾಡಿದ ಎನ್ನುವುದಕ್ಕೂ ಅಲ್ಲಿಯೇ ಉತ್ತರವನ್ನು ಹುಡುಕಬೇಕಲ್ಲವೆ?
ಸೀತಾ ಪರಿತ್ಯಾಗದ ಪ್ರಶ್ನೆ, ಮುಂದಿನ ಕಂತಿನಲ್ಲಿ…