– ಮಿಂಚು-
ಇದರ ತುಂಬ ಬರೀ ಮಡಚಿಟ್ಟ ಪುಟಗಳೇ. ಈ ರೂಮಿಗೆ ಬೀಗ ಹಾಕಿ, ನಾನೇ ಕೀಲಿ ಕಳೆದು ಹಾಕಿದ್ದೇನೆ. ಹೀಗೆ ಕತ್ತಲಲ್ಲಿ ಕೂಡಿಟ್ಟರೂ ಈ ಕತೆಗಳು ನೂರಾಗಿ, ಸಾವಿರವಾಗಿ, ಕೊಳೆತ ತರಕಾರಿಯ ಮೇಲೆ ಗಿಜಿಗುಟ್ಟುವ ಹುಳಗಳಂತೆ ತೆವಳುತ್ತ ತೆವಳುತ್ತ ಎಲ್ಲೆಲ್ಲೂ ಹರಿದಾಡಿ, ಗೋಡೆಯೊಳ ತೂರಿ, ಇತ್ತಲಿಂದ ಹೊರಬರುತ್ತಿವೆ, ನನ್ನ ಹುರಿದು ಮುಕ್ಕುತ್ತಿವೆ.
ಎಲ್ಲರೂ ಕೇಳ್ತಾರೆ. ಮೂವತ್ತು ದಾಟಿದ್ರೂ ಮದುವೆಯತ್ತ ಮನಸ್ಯಾಕೆ ಮಾಡಿಲ್ಲ ಅಂತ. ಈಗಿನ ಕಾಲದಲ್ಲಿ ಮದುವೆಗೆ ಇಂತಿಷ್ಟೇ ವಯಸ್ಸಾಗಿರಬೇಕು ಅಂತೇನಿಲ್ಲ ಬಿಡಿ. ಆದ್ರೂ, ಸಂಪ್ರದಾಯಸ್ಥ ಮನೆತನ, ಕೆಳ್ತಾರೆ.
ಹಾಗಂತ ನಾನು ಚೆಂದವಿಲ್ಲ ಅಂತೆನಲ್ಲ. ಅವತ್ತಿನ ಸಹಪಾಠಿಗಳಿಂದ ಹಿಡಿದು, ಇವತ್ತಿನ ಸಹೋದ್ಯೋಗಿಗಳವರೆಗೂ ಎಲ್ರೂ ನನ್ನ ಸ್ಮಾರ್ಟ್ ಅಂತಾರೆ. ಇಪ್ಪತ್ತೈದರ ಹಾಗೆ ಕಾಣುವ ನನ್ನ ಮೂವತ್ತರ ಬಗ್ಗೆ ನನಗೂ ಹೆಮ್ಮೆ ಇದೆ. ಆದರೆ, ಯಾವ ಪುರುಷಾರ್ಥಕ್ಕೆ?
ಅವನೊಬ್ಬನಿದ್ದ. ಅಂದಗಾರ. ಚಂದಿರ ಮುಖ, ಬೋಳು ಮೀಸೆ, ನುಣ್ಣನೆ ಗಡ್ಡ.ಕಣ್ಣಲ್ಲಿ ತೀರದ ತುಂಟತನ. ನನಗಿಷ್ಟವಾಗುವ ಬಣ್ಣ ಅವಂಗೂ ಇಷ್ಟ. ನಾನಿಷ್ಟಪಡುವ ಪರ್ಫ್ಯೂಮ್, ಐಸ್ ಕ್ರೀಮ್ ಎಲ್ಲವೂ ಅವನಿಗಿಷ್ಟ. ಅವಂಗೆ ಕಂಪನಿ ಕೊಡಲೆಂದೇ ಕುಡಿಯೋದು ಕಲ್ತಿದ್ದೆ ನಾನು.
ನಾನವನನ್ನ ಹುಚ್ಚುಚ್ಚಾಗಿ ಪ್ರೀತಿಸ್ತಿದ್ದೆ. ಅವನನ್ನ ಮಾತ್ರ. ಅವನ ಕೈಬೆರಳ ತುದಿ ಸೋಂಕಿದರೂ ರೋಮ ನಿಮಿರಿ ನಿಲ್ತಿತ್ತು. ಉಸಿರಾಟ ಏರುಪೇರಾಗಿ ಹೋಗ್ತಿತ್ತು. ಸಧ್ಯ. ಯರೂ ಇದನ್ನ ಗಮನಿಸ್ತಿರಲಿಲ್ಲ ಅನ್ನೋದೇ ಸಮಾಧಾನ! ಆದರೆ… ಅಂವ ಕೂಡ ಇದನ್ನ ತಲೆಗೆ ತೊಗೊಳ್ಳದೆ ಉಳಿದುಬಿಟ್ಟ. ಉಳಿದೆಲ್ಲ ಗಂಡಸರ ಹಾಗೆ ಅವನಿಗೂ ಒಬ್ಬಳು ಸುಂದರಿ ಗಂಟು ಬಿದ್ದಳು. ನಾನು ಅವನ ಬಳಿ ಪ್ರೀತಿ ತೋರಿಕೊಳ್ಳುವ ಸಾಹಸವನ್ನೇ ಮಾಡಲಿಲ್ಲ.
ಮನೆಯಲ್ಲಿ ನನ್ನ ಮದುವೆ ಮಾತುಕಥೆ. “ಜೀವ ಕಳ್ಕೊಳ್ತೀನಿ ಹೊರತು, ಮದ್ವೆಯಾಗೋಲ್ಲ” ನಾನೂ ಹಟ ಹಿಡಿದೆ. “ಯಾರನ್ನದ್ರೂ ಪ್ರೀತಿಸ್ತಿದೀಯಾ?” ಕೇಳಿದರು. ನನು ಹೌದೆಂದೆ. ಅದು ಯಾರು ಯಾರೆಂದು ಪೀಡಿಸಿದರು.
ಊಹೂಂ… ಹೇಗೆ ಹೇಳಲಿ? ನಾನು ಡಾರ್ಕ್ ರೂಮಲ್ಲಿ ಕೂಡಿಟ್ಟಿರೋದು ಅದನ್ನೇ. ಈ ಮನೆಮಂದಿ ಬೇಕಿದ್ದರೆ ಹೀಗೆ ಜೀವಮನವಿಡೀ ದೇವದಾಸನಂತೆ ಇರೋದನ್ನ ನುಂಗಿಕೊಂಡು ನಕ್ಕಾರು.
ಆದರೆ….
ನಾ ಪ್ರೀತಿಸಿದ್ದು ಒಬ್ಬ ಗಂಡಸನ್ನ ಅಂದರೆ ಸಹಿಸಿಯಾರೇ? ಅದರಲ್ಲೂ, ಹತ್ತು ದೇವರಿಗೆ ಹರಕೆ ಹೊತ್ತು ಹುಟ್ಟಿದ ಕಿರಿಮಗ ನಾನಾಗಿರುವಾಗ!?