ಭೂಮಿಯಲ್ಲಿ ಋಷಿಗಳು ತಪಸ್ಸಿಗೆ ಕುಳಿತರೆ ಸಾಕು, ಇಂದ್ರ ಸಿಂಹಾಸನಕ್ಕೆ ನಡುಕ! ಪ್ರತಿ ಬಾರಿಯೂ ಇಂಥದನ್ನು ತಡೆಯಲು ಆತ ತನ್ನ ಅಪ್ಸರೆಯರನ್ನು ಅವರತ್ತ ಕಳುಹಿಸಿ ತಪೋಭಂಗ ಮಾಡುತ್ತಿದ್ದ. ಈ ಬಗೆಯ ಕಥೆಗಳಲ್ಲಿ ವಿಶ್ವಾಮಿತ್ರನ ತಪೋಭಂಗದ ಕಥೆ ಅತಿ ಜನಪ್ರಿಯ. ಅಂಥದೇ ಇಲ್ಲಿ, ಮತ್ತೊಂದು…
ಹೀಗೊಬ್ಬನಿದ್ದ ಕಂಡು ಮಹರ್ಷಿ. ಆತನೂ ಒಮ್ಮೆ ತಪಸ್ಸಿಗೆ ಕುಂತ. ಹೆದರಿದ ಇಂದ್ರ ಪ್ರಮ್ಲೋಚೆ ಎಂಬ ಅಪ್ಸರೆಯನ್ನು ತಪಸ್ಸು ಕೆಡಿಸಲೆಂದೇ ಕಳಿಸಿಕೊಟ್ಟ. ಪ್ರಮ್ಲೋಚೆಯ ರೂಪ ಲಾವಣ್ಯ ಕಂಡು ಮುನಿಯನ್ನು ಸೆಳೆದವು. ಇಂದ್ರನ ತಂತ್ರ ನೆರವೆರಿತು, ಪ್ರಮ್ಲೋಚೆಯಲ್ಲಿ ಮುನಿಯ ತಪೋಸಂಚಯ ನಷ್ಟವಾಯಿತು. ಇಂಥ ದಿವ್ಯ ವೀರ್ಯದಿಂದ ಅತ್ಯದ್ಭುತ ಲಾವಣ್ಯದ ಹೆಣ್ಣು ಶಿಶು ಜನಿಸಿತು. ಎಂದಿನಂತೆ ಅಪ್ಸರೆ ಮಗುವನ್ನು ಅಲ್ಲಿಯೇ ಬಿಟ್ಟು ಹೊರಟುಹೋದಳು. ಇತ್ತ ಕಂಡು ಮುನಿ, ತನ್ನ ಶಕ್ತಿಯನ್ನು ಪುನಃ ಸಂಪಾದಿಸಲು ತಪಸ್ಸಿಗೆ ಕುಂತುಬಿಟ್ಟ.
ತಂದೆ ತಾಯಿಯರ ಉಪೇಕ್ಷೆಗೆ ಒಳಗಾದ ಮಗು ಕಾಡಿನಲ್ಲಿ ಒಂಟಿಯಾಗಿ ಹಸಿವು, ಚಳಿ ಗಾಳಿಯಿಂದ ತತ್ತರಿಸಿ ಒಂದೇಸಮನೆ ಅಳತೊಡಗಿತು. ಈ ಮಗುವನ್ನು ಕಂಡ ಚಂದ್ರದೇವ ತನ್ನ ಅಮೃತ ಕಿರಣಗಳನ್ನು ಊಡಿ ಮಗುವನ್ನು ಸಾಂತ್ವನಗೊಳಿಸಿದ. ತನ್ನ ಆಜ್ಞಾಪಾಲಕರಾದ ವೃಕ್ಷದೇವತೆಗಳಿಗೆ ಮಗುವಿನ ಪೋಷಣೆಯ ಜವಾಬ್ದಾರಿ ಕೊಟ್ಟ. ಹೀಗೆ ಕಂಡು- ಪ್ರಮ್ಲೋಚೆಯರ ಮಗಳಾದ ‘ಮಾರಿಷೆ’ಯು ವನದೇವಿಯ ಮಡಿಲಲ್ಲಿ ಬೆಳೆಯತೊಡಗಿದಳು.
ಪ್ರಾಚೀನ ಬರ್ಹಿ ಎಂಬೊಬ್ಬ ರಾಜನದು ಬೇರೆಯೇ ಕಥೆ. ಅದಿನ್ನೂ ದೊಡ್ಡ ಕಥೆ. ಅವನ ಹತ್ತು ಮಕ್ಕಳ ಹೆಸರೂ ’ಪ್ರಚೇತ’ರೆಂದೇ. ಆ ಮಕ್ಕಳು ಕೂಡ ತಪೋಸಂಪನ್ನರು. ಬ್ರಹ್ಮನ ಆದೇಶದ ಮೇರೆಗೆ ಆ ಹತ್ತೂ ಸಹೋದರರು ಮಾರಿಷೆಯನ್ನು ಮದುವೆಯಾದರು!
ಮುಂದೆ ಮಾರಿಷೆಯ ಗರ್ಭದಲ್ಲಿ ಪ್ರಚೇತರು ’ದಕ್ಷ’ನನ್ನು ಪಡೆದರು. ದಕ್ಷ, ಭೂಲೋಕದಲ್ಲಿ ಮಾನವ ಸಂತಾನವನ್ನು ವ್ಯಾಪಕಗೊಳಿಸಿ, ’ಪ್ರಜಾಪತಿ’ ಅನಿಸಿಕೊಂಡನು.
ಈತ ಹಿಂದೆ ದಾಕ್ಷಾಯಣಿಯ ತಂದೆಯಾಗಿ, ಅವಳ ಆತ್ಮಾಹುತಿಗೆ ಕಾರಣನಾಗಿ ಶಿವನಿಂದ ದಂಡನೆಗೊಳಗಾಗಿದ್ದನಲ್ಲ, ಅದೇ ದಕ್ಷ. ಶಿವ ಶಾಪದಿಂದ ಮತ್ತೆ ಭೂಮಿಯಲ್ಲಿ ಹುಟ್ಟಿಬಂದ. ಶಪಿತನಾದರೂ ಆತ ಬ್ರಹ್ಮನ ಮಗನಲ್ಲವೇ? ಭೂಮಿಯಲ್ಲಿ ಹುಟ್ಟಲು ಆತನಿಗೆ ಸತ್ತ್ವಯುತ ಕ್ಷೇತ್ರವೇ ಆಗಬೇಕಿತ್ತು. ಅದಕ್ಕೆಂದೇ ಕಂಡು-ಪ್ರಮ್ಲೋಚೆಯರ ಪ್ರಹಸನವನ್ನು ನಿಯತಿ ಏರ್ಪಡಿಸಿದ್ದಳು!
ಮುಂದೆ ಹತ್ತು ಮಂದಿ ಪ್ರಚೇತರು ಮಾರಿಷೆಯಲ್ಲಿ ವೀರ್ಯ ಪ್ರತಿಷ್ಟಾಪಿಸಿ ದಕ್ಷನನ್ನು ಪಡೆದರು.
ಈ ಕಥೆ ಭಾಗವತ ಪುರಾಣದ ನಾಲ್ಕನೆ ಸ್ಕಂಧದಲ್ಲಿ ಬರುತ್ತದೆ.