ಎಷ್ಟೊಂದು ದಿನಗಳಾಗಿತ್ತು ನಾವು ಹೀಗೆ ಪತ್ರದಲ್ಲಿ ಹರಟಿ, ಅಲ್ವಾ? ಇರಲಿ. ನೀನು ಹಾಕಿದ ಕಂಡೀಷನ್ ಒಂದು ರೀತಿಯಲ್ಲಿ ಒಳ್ಳೆಯದೇ ಆಯ್ತು. ನನಗೂ ಹಳೆಯ ನೆನಪುಗಳನ್ನ ಕೆದಕಲಿಕ್ಕೊಂದು ನೆವ ಸಿಕ್ಕಹಾಗಾಯ್ತು! ಆದ್ರೆ, ನೀನೂ ನನಗೆ ಪತ್ರ ಬರೀಬೇಕು. ಪ್ರತೀ ಪತ್ರದಲ್ಲೂ ಒಂದು ಕಥೆ ಇರಬೇಕು. ಸರೀನಾ? ಮೊದಲು ನನ್ನಿಂದ್ಲೇ ಶುರುವಾಗಿಬಿಡಲಿ.
ಆಗ ರಷ್ಯಾ ಒಡೆದು ಚೂರಾಗಿರಲಿಲ್ಲ. ಅದು ಸೋವಿಯತ್ ರಷ್ಯಾ. ವಿಶ್ವದ ಬಲಿಷ್ಠ ದೇಶ. ಅಂತಹ ರಷ್ಯಾದ ವಿರುದ್ಧ ಕಾಲುಕೆರೆದುಕೊಂಡು ಯುದ್ಧಕ್ಕೆ ಹೋದ ಆಫ್ಘಾನಿಸ್ತಾನ ತನ್ನ ದೇಶದ ಇಪ್ಪತ್ತೈದು ಲಕ್ಷ ಜನರನ್ನು ನಿರಾಶ್ರಿತರನ್ನಾಗಿ ಮಾಡಿಹಾಕಿತ್ತು. ಅದು ೧೯೮೩-೮೪ರ ಕಥೆ. ನೂರಾರು ನಿರಾಶ್ರಿತರ ಶಿಬಿರಗಳಲ್ಲಿ ಜನ ಕಳೆದುಹೋಗಿದ್ದರು.
ಛಾಯಾಗ್ರಾಹಕ ಪತ್ರಕರ್ತ ಸ್ಟೀವ್ ಮೆಕ್ ಕಮ್ ದುಃಖ, ದೈನ್ಯ, ಹತಾಶೆ, ಸಂಕಟವನ್ನು ಚಿತ್ರದಲ್ಲಿ ಬಿಂಬಿಸಲೆಂದೇ ಕ್ಯಾಮೆರಾ ಹಿಡಿದು ಈ ಯುದ್ಧ ನಿರಾಶ್ರಿತರ ಶಿಬಿರಗಳಲ್ಲಿ ತಿರುಗುತ್ತಿದ್ದ.
ಪಾಕಿಸ್ತಾನ- ಆಫ್ಘನ್ ಗಡಿಯ ನಸೀರಾಬಾಗ್ ನಲ್ಲೊಂದು ನಿರಾಶ್ರಿತರ ಶಿಬಿರ. ಅವತ್ತು ಡಿಸೆಂಬರ್ ನ ಸಂಜೆ. ಟೆಂಟೊಂದರ ಪರದೆ ಸರಿಸುತ್ತ ೧೨ ವರ್ಷದ ಬಾಲಕಿಯೊಬ್ಬಳು ಹೊರಬರುವುದಕ್ಕೂ, ಸ್ಟೀವ್ ಕ್ಯಾಮೆರಾ ಹಿಡಿದು ಆ ಟೆಂಟಿನತ್ತ ತಿರುಗುವುದಕ್ಕೂ ಸರಿಯಾಗಿಹೋಯ್ತು. ಪರಿಣಾಮ, ಒಂದು ಅದ್ಭುತ ಚಿತ್ರ. ಕೆಂಪು ದುಪಟ್ಟಾ ಹೊದ್ದ ಮುಗ್ಧ ಬಾಲೆ, ಒಳಗೆ ಕಟ್ಟಿಗೆಯ ಒಲೆಯಲ್ಲಿ ಅಡುಗೆಯ ಕೆಲಸಕ್ಕೆ ನಿಂತಿರಬೇಕು. ಹೊಗೆ ತಾಳಲಾರದೆ ಹೊರಗೆ ಬಂದಳೇನೋ? ಅವಳ ಹಸಿರು ಕಂಗಳಲ್ಲಿ ನೀರು ಮಡುಗಟ್ಟಿತ್ತು. ಮರು ವರ್ಷ ಜೂನ್ ನಲ್ಲಿ ಆ ಚಿತ್ರ ನ್ಯಾಷನಲ್ ಜಿಯಾಗ್ರಫಿಕ್ ಸಂಚಿಕೆಯ ಮುಖಪುಟ ಅಲಂಕರಿಸಿತು. ಮತ್ತೆ ಅದು ಹಿಂದೆ ನೋಡಲಿಲ್ಲ. ಆ ಚಿತ್ರವೇ ಒಂದು ಜಾಗತಿಕ ಸುದ್ದಿಯಾಯಿತು. ಜಗತ್ತಿನ ಮೂಲೆ ಮೂಲೆಯ ಶಿಲ್ಪಿಗಳು, ಚಿತ್ರಕಾರರು, ಕಸೂತಿ- ಕೆತ್ತನೆಕಾರರು ಈ ಚಿತ್ರವನ್ನು ಮಾದರಿಯಾಗಿಟ್ಟುಕೊಂಡು ಇನ್ನಷ್ಟು ಚಿತ್ರ ಬರೆದರು. ಕೊನೆಗೆ ಈ ಚಿತ್ರ ಜಾಹೀರಾತು ಕಂಪೆನಿಗಳನ್ನು ಸೆಳೆಯಿತು.
ಒಂದು ಚಿತ್ರ, ಸ್ಟೀವ್ ನ ವರ್ತಮಾನ, ಭವಿಷ್ಯ ಎಲ್ಲವನ್ನೂ ಬದಲಾಯಿಸಿತ್ತು. ಖ್ಯಾತಿ, ಹಣ, ಸ್ಟೀವ್ ನನ್ನು ಆವರಿಸಿತು.
ಅದೊಂದು ದಿನ ಸ್ಟೀವ್ ಯೋಚನೆಗೆ ಬಿದ್ದ. ನನಗೆ ಇಷ್ಟೆಲ್ಲ ತಂದುಕೊಟ್ಟಿರುವ ಈ ಚಿತ್ರದಲ್ಲಿರುವ ಹುಡುಗಿಗೆ ಏನು ಸಿಕ್ಕಿದೆ? ಅವಳಿಗೇನಾದರೂ ಸಹಾಯ ಮಾಡಬೇಕು ಅಂತ ನಿಶ್ಚಯಿಸಿದ. ಅವಳನ್ನು ಹುಡುಕಲು ಹೊರಟ. ನಸೀರಾಬಾದಿನ ಶಿಬಿರ ಬರಖಾಸ್ತಾಗಿತ್ತು. ಸ್ಟೀವ್ ಅವಳನ್ನು ಹುಡುಕಲು ಒಂದಲ್ಲ, ಹತ್ತು ಸಲ ಬಂದ. ಅವಳು ಸಿಗಲಿಲ್ಲ. ಆ ಹುಡುಗಿ ದೊಡ್ಡವಳಾಗಿ ’ಬುರ್ಖಾ’ ಸೇರಿಬಿಟ್ಟಿದ್ದಳು. ಕೊನೆಗೆ ಇವನು ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟ. ಹಣದ ಆಸೆಗೆ ಯಾರ್ಯಾರೋ ಬಂದರು. ಅಲ್ಪ ಸ್ವಲ್ಪ ಹೋಲುವವರು ತಮ್ಮದೇ ಚಿತ್ರ ಅಂತ ವಾದಕ್ಕಿಳಿದರು. ಕೊನೆಗೆ ಆ ಪತ್ರಿಕೆ ಒಂದು ತಂಡವನ್ನೇ ಹುಡುಕಲು ಕಳುಹಿಸಿತು. ಆಗಲೂ ಫಲಿತಾಂಶ ಶೂನ್ಯ.
ಸ್ಟೀವ್ ಸೋಲಲಿಲ್ಲ. ಪ್ರಯತ್ನ ಮುಂದುವರೆಸಿದ್ದ. ೨೦೦೨ರಲ್ಲಿ ಅದು ಫ್ಲಿಸಿತು. ೧೮ ವರ್ಷದ ತರುವಾಯ ಆ ಚಿತ್ರದ ಹುಡುಗಿ ಸಿಕ್ಕಳು. ಅವಳು ಶರ್ಬತ್ ಗುಲಾ!
ಅವಳೇ ಅವಳೆಂದು ಸಾಬೀತಾಗಲು ತಿಂಗಳು ಬೇಕಾಯಿತು. ಸ್ಟೀವ್ ಆ ಗುಲಾ ಸೇರಿದಂತೆ ಅಂತಹ ನಿರಾಶ್ರಿತ ಹೆಣ್ಣುಮಕ್ಕಳಿಗೆಂದೇ ದತ್ತಿನಿಧಿ ಸ್ಥಾಪಿಸಿದ್ದಾನೆ.
ಒಂದು ಚಿತ್ರ ನೂರು ಶಬ್ದಗಳನ್ನ ಕಟ್ಟಿಕೊಡುತ್ತವೆಯಂತೆ. ಇಲ್ಲಿ ಗುಲಾಳ ಆ ಒಂದು ಚಿತ್ರ ನೂರಾರು ಬದುಕು ಕಟ್ಟಿಕೊಟ್ಟ ಬಗೆ ನೋಡು! ಸ್ಟೀವ್ ಕೂಡಾ ಮೆಚ್ಚುಗೆಯಾದ. ನಿನಗೇನನ್ನಿಸಿತು ಹೇಳು.
ಕಾಯ್ತಿರ್ತೀನಿ.
ನಿನ್ನ,
ಪೂರ್ವಿ.