Archive for the ‘ಹೀಗೇ ಸುಮ್ನೆ..’ Category

ಇದೊಂದು ಸಾರಿ ಕ್ಷಮಿಸಿಬಿಡು ಗೆಳೆಯಾ,
ಇದು ನನ್ನ ಕೊನೆಯ ವಂಚನೆ!
ನಿನ್ನ ಜಾದೂ ಪೆಟ್ಟಿಗೆಯ ಕುದುರೆ
ಮತ್ತೆಂದೂ ನಗುವುದಿಲ್ಲ
ನಂಬು, ನನ್ನಾಣೆ.

ಏನು ಮಾಡಲಿ ಹೇಳು, ಗೆಳೆಯಾ,
ಹೃದಯ ಹಾಳು ಹೆಣ್ಣು!
ನಿನ್ನ ತಿಳಿ ಮನಸಿಗೆ ನೂರೆಂಟು ಕಲ್ಲು
ಸಾಕು, ಎಸೆಯಲಾರೆ ಮತ್ತೆಂದೂ
ನೋವ ನಾನು.

ಏಕಾಗುವುದು ಮತ್ತೆ ಮತ್ತೆ ಗೆಳೆಯಾ,
ಹೀಗೆ ನನ್ನಿಂದಲೇ ತಪ್ಪು?
ನಾ ಕಲಿತ ಪಾಠವೇ ಹಾಗಿತ್ತು ಬಹುಶಃ
ದಂಡಿಸದೆ ತಿದ್ದಿ ತೀಡಿ
ಒಮ್ಮೆ ನನ್ನನಪ್ಪು.

ಆಫೀಸಿಂದ ಹೊರಟು ನಿಂತರೆ ಸದಾ ಗಿಜಿಗುಡೋ ರಸ್ತೆ ಬಿಕೋ ಅಂತ ಅಂಗಾತ ಬಿದ್ದುಕೊಂಡಿತ್ತು. ಒಂದರೆ ಗಳಿಗೆಯಲ್ಲಿ ವಯಸ್ಸಾದ ರಾಜಕಾರಣಿಗಳೆಲ್ಲ ಕಣ್ಣೆದುರು ಹಾದುಹೋದರು. ಸಾಲದ್ದಕ್ಕೆ ರಾಮಸೇತು ಗಲಾಟೆ ಬೇರೆ. ರಾಮ ರಾಮಾ…ಅಂದುಕೊಳ್ತಲೇ ಆಗೊಂದು ಈಗೊಂದು ಭರ್ರೆದು ಕುಂಡೆ ತಿರುಗಿಸಿ ಹೋಗ್ತಿದ್ದ ಆಟೋಗಳಿಗೆ ಕೈಯ್ಯೊಡ್ಡುತ್ತ ನಿಂತೆ.

ಮಿನಿಮಮ್ ದೂರದ ಮನೆಗೆ ಇಪ್ಪತ್ತು ಕೊಡಿ ಅಂತ ನಖರಾ ಆಡ್ತಿದ್ದವರಿಗೆಲ್ಲ ಹೆಂಡ್ತಿ ಲಟ್ಟಣಿಗೇಲಿ ಬಡೀಲಿ ಅಂತ ಶಾಪ ಹಾಕ್ತಾ, ಎಲ್ಲಾದಕ್ಕೂ “ಹೇಣ್ತಿ ಹೆಣ್ ಹಡಿಯಾ” ಅಂತ ಬೈತಿದ್ದ ಮಾವನ್ನ ನೆನೆಸ್ಕೊಂಡು ಅವರಿಗೆ ತಕ್ಕ ಅಳಿಯನಾಗ್ತಾ, ಧಿಕ್ಕಾರಕ್ಕೆ ಹೆದರಿ ಅದನ್ನ ಮನಸ್ಸಲ್ಲೇ ಗೊಣಗಿಕೊಳ್ತಾ ನಿಂತುಕೊಂಡಿದ್ದೆ. ಆದರೂ ಸಮಸ್ಯೆ ಬಗೆಹರಿದಿರಲಿಲ್ಲ. ಬೆಂಗಳೂರಿನಂಥಾ ಬೆಂಗಳೂರಿನ ಈ ಗಿಜಿಗುಡುವ ರಸ್ತೆ ಇವತ್ಯಾಕೆ ಅನಾಥವಾಗಿ ಬಿದ್ದಿದೆ?

ಅಂತೂ ಕುತ್ತಿಗೆ ಸುತ್ತ ಮಫ್ಲರ್ ಸುತ್ತಿಕೊಂಡ ಯುವ ಆಟೋದವ ನನ್ನ ಮೇಲೆ ಕರುಣಿ ತೋರಿಸ್ದ. “ಮ್…ಇವಂಗೆ ಗಂಡೇ ಹುಟ್ಟೋದು!” ಎಲ್ಲೋ ಎದ್ದ ದನಿ, ಅಲ್ಲೇ ಉಶ್ ಉಶ್ ಆಗಿಹೋಯ್ತು. ಲೈಸೆನ್ಸ್ ಡಿಸ್ಪ್ಲೇ ಕಾರ್ಡಿನ ಮೇಲೆ ಆವೇದ ಅಂತ ಹೆಸರಿತ್ತು. ನನ್ನ ೧೯೪೨ ಜಮಾನಾದ ಹೆಸರಿಗೆ ಹೇಸಿ, ಅವನ ಮೇಲೆ ಲೈಟಾಗಿ ಹೊಟ್ಟೆಕಿಚ್ಚಾಯ್ತು! 

ಎಂಥದೋ ಲಹರಿಗೆ ಬಿದ್ದು ಗುನುಗುತ್ತಿದ್ದವ ಇದ್ದಕ್ಕಿಧಾಗೇ ಹಾಡು ನಿಲ್ಲಿಸಿ ಅಂದ. ” ಬಡ್ಡೀ ಮಕ್ಳು ಇವತ್ತು ಸೋಲ್ಬೇಕು ಸಾರ್!” ಏನೋ ಚೂರು ಚೂರು ನೆನಪಾಯ್ತು… ಅರೆ! ಇವತ್ತು ೨೦-೨೦ ವರ್ಲ್ಡ್ ಕಪ್ ಫೈನಲ್!!  

“ಸಾಯಕ್ಕೆ… ಒಂದೇ ಒಂದ್ ಹುಳ ಇಲ್ಲ ರೋಡಲ್ಲಿ. ನೋಡಿ ಸಾರ್, ಅಲ್ನೋಡಿ, ಹೆಂಗ್ ಜನ ಆ ಅಂಗ್ಡೀಲ್ ತುಂಬ್ಕೊಂಡಿದಾರೆ ಅಂತ!?”

ತಥ್! ನಾಳೆ ಸಿಗಬಹುದಾಗಿದ್ದ ರಜೆಗೆ ಕಲ್ಲು ಬಿದ್ದಿತ್ತು. ಯಾರೂ ಸತ್ತಿರಲಿಲ್ಲ. ಎಲ್ಲೂ ಯಾವ ಗಲಭೆಯೂ ಸದ್ದು ಮಾಡಿರಲಿಲ್ಲ. ಆಟೋ ಹುಡುಗ ಸ್ವಲ್ಪ ಕೂಡ ಚೌಕಶಿ ಮಾಡದಿದ್ದದ್ದು ಖುಶಿಯಾಯ್ತು. ಅಂವ ಚಿಲ್ಲರೆ ಹುಡುಕುವ ನೆವ ತೆಗೆಯುತ್ತಿದ್ದಾಗ, ಏನೋ ಹುಕ್ಕಿ ಬಂದು, “ಇರ್ಲಿ ಬಿಡು” ಹೇಳಿದೆ.

ತಂಗಿ ಮಾಮೂಲಿನಂತೆ ಕಾಯಿ ತುರಿಯದ, ತಿರುವಿ ಹಾಕದ ಮಿಶ್ರ ತರಕಾರಿಯ ಹುಳಿ ಮಾಡ್ತಿದ್ದಳು. ಅವಳ ಕುಕ್ಕರು ಕೂಗೋದಕ್ಕೂ ಇದ್ದಕ್ಕಿದ್ ಹಾಗೇ ಢಮ್ ಅನ್ನೋದಕ್ಕೂ ಸರಿಯಾಯ್ತು. ಅದು ಪಟಾಕಿ ಸದ್ದು! ಕಾಲು ಗಂಟೆ ಪೂರ್ತಿ ಕಿವಿ ಕಿತ್ತು ಹೋಗೋ ಸದ್ದು. ಕ್ರಿಕೆಟ್ ಅಂದ್ರೆ ಸಾಕು ಕಿಡಿಕಾರ್ತಿದ್ದ ತಂಗಿ, ಹೊಸತಾಗಿ ’ಚಕ್ ದೇ’ ನೋಡಿ ಬಂದಿದ್ದಳು. ” ಗೆದ್ವು ಮುಂಡೇವು!” ಹುಳ್ಳಗೆ ನಕ್ಕಳು.

“ಹಾಕೀ ಮೆ ಚಕ್ಕೇ ನಹೀಂ ಹೋತೆ”  ಶಾರುಖ್ ಡೈಲಾಗು ನೆನಪಾಯ್ತು. ಜೊತೆಗೆ ಚಿತ್ರ ಪ್ರಭದಲ್ಲಿ ನೋಡಿದ ಟೈಟಲ್ಲು- ’ಹೆತ್ತರೆ ಹೆಣ್ಣನ್ನೇ ಹೆರಬೇಕು’. ತಂಗಿ ಮೇಲೆ ಅಕ್ಕರೆ ಉಕ್ಕಿತು.

“ಬಾರೇ ಪಾನಿಪೂರಿ ತಿನ್ನಿಸ್ತೀನಿ” ಅನ್ನುತ್ತ ಎದ್ದು ನಿಂತೆ. ಅವಳು ಸ್ವರ್ಗ ಸಿಕ್ಕ ಹಾಗೆ ಅಷ್ಟಗಲ ನಕ್ಕಳು.