ನವೆಂಬರ್ ೧, ಕನ್ನಡಿಗರ ಹೆಮ್ಮೆಯ ದಿನ. (ಹೊಸತಾಗಿ ಹೇಳ್ತಿದ್ದೀನಿ ಅಂತ ಬೈಕೊಳ್ಬೇಡಿ ಮತ್ತೆ!)
ಪತ್ರಿಕೆಗಳಲ್ಲಿ ವಾರಕ್ಕೊಂದು ದಿನ ವಿಶೇಷ ಬರಹಗಳಿಗೆ, ಸಾಹಿತ್ಯಕ್ಕೆ, ಕತೆ-ಕವನ-ಪ್ರಬಂಧಗಳಿಗೆ ಮೀಸಲು. ಆದ್ರೆ ಈ ಬ್ಲಾಗವತಾರದಿಂದಾಗಿ ನಿತ್ಯವೂ ಒಂದಲ್ಲ ಒಂದು ಕೀಪ್ಯಾಡಿನಿಂದ ಹೊಸತೊಂದು ಕೃತಿ ಮೂಡಿಬರುತ್ತಿದೆ. ಹಾಗೆ ಬರುತ್ತಿರುವುದರಲ್ಲಿ ಶೇ. ೧೦ ಗಟ್ಟಿ ಬರಹಗಳು ಅಂದುಕೊಂಡರೂ, ಕನ್ನಡ ಬರಹ ಜಗತ್ತು ಶ್ರೀಮಂತವಾಗುತ್ತಿದೆ ಅಂತ ಹೇಳಲಡ್ಡಿಯಿಲ್ಲ.
ಈ ಬ್ಲಾಗಿಗರಲ್ಲಿ ಸಿಲಿಕಾನ್ ಕಣಿವೆಯ ಕಂದಮ್ಮಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ. ಇನ್ನುಳಿದಂತೆ ಹೊರನಾಡ ಕನ್ನಡಿಗರು, ಪರದೇಶಗಳಲ್ಲಿ ಕಳೆದುಹೋಗಬಾರದೆಂದು ನಿರ್ಧರಿಸಿ ಬ್ಲಾಗ್ ಬರಹದ ಮೂಲಕ ನಿತ್ಯ ಸಂಪರ್ಕದಲ್ಲಿರುವವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ವಿಪರೀತ ಓದಿಕೊಂಡವರೆಲ್ಲ ಕನ್ನಡ ಮರೆಯುತ್ತಾರೆ ಅನ್ನುವವರಿಗೂ ಈ ಬ್ಲಾಗುಗಳು ಉತ್ತರ ನೀಡುತ್ತವೆ.
ಇಂದಿನ ಸಾಫ್ಟ್ ವೇರ್ ಯುಗದಲ್ಲಿ ಭುವನೇಶ್ವರಿಯ ಮಕ್ಕಳು ಕನ್ನಡ ಡಿಂಡಿಮ ಬ್ಲಾಗಿಸತೊಡಗಿದ್ದಾರೆ!!
* * * *
“ಇವತ್ತಿನ ಪೀಳಿಗೆಗೆ ಓದೋ ಸಹನೆಯೇ ಇಲ್ಲ. ಎಲ್ಲರೂ ಬರೀತೀನಿ ಅನ್ನೋರೇ….! ಈಗೆಂಥದೋ ಈ ಬ್ಲಾಗು? ಇದು ಬೇರೆ ಕೇಡು!!”
ಅಜ್ಜ ಸಿಡುಕುತ್ತಿದ್ದರು.
ಅವರು ನನ್ನ ಚಿಕ್ಕಜ್ಜ. ಮೊದಲಿಂದ್ಲೂ ಅವರಿಗೆ ಪುಸ್ತಕಗಳು ಅಂದ್ರೆ ಆಯಿತು. ಅದು ಈಗಿನಂತೆ ’ಓದುವ ಪ್ರವೃತ್ತಿಯವರೆಲ್ಲ ಬರೆಯಲು ಪ್ರಯತ್ನಿಸಲೇಬೇಕು’ ಅಂತ ತಮಗೆ ತಾವೇ ನಿಯಮ ರೂಪಿಸಿಕೊಂಡಂಥ ಕಾಲವಲ್ಲ.ಆಗಿನ ಕಾಲದ ಇತರೆಲ್ಲ ಶುದ್ಧಾಂಗ ಓದುಗರಂತೆ ಅವರೂ ಒಬ್ಬ ಓದುಗರು.
ಸಾಫ್ಟ್ ವೇರ್ ಮಕ್ಕಳಿಂದಾಗಿ ಅವರ ಮನೆಗೂ ಕಂಪ್ಯೂಟರ್ರು, ನೆಟ್ಟುಗಳು ಕಾಲಿಟ್ಟಿದ್ದವು. ೭೦ರ ನನ್ನಜ್ಜನಿಗೆ ಹೊಸತನ್ನು ಕಲಿಯುವುದರಲ್ಲಿ ಏನೋ ಖುಷಿ. ಆ ಸಂಭ್ರಮದ ಸಂಕೋಚಕ್ಕೋ ಏನೋ ಯಾವಾಗಲೂ ಹೊಸ ಪ್ರಯೋಗಗಳನ್ನು ಹೀಯಾಳಿಸುತ್ತಲೇ ಅದರಲ್ಲಿ ಕೈ ಹಕುತ್ತಿದ್ದರು ಅವರು.
“ಕನ್ನಡದಲ್ಲಿ ಎಷ್ಟೆಲ್ಲ ಬರ್ತಿದೆ ನೋಡಿ… ಹೊಸ ಹೊಸ ಹುಡುಗರು ಬರೀಲಿಕ್ಕೆ ಶುರು ಮಾಡಿದಾರೆ” ಅಂತ ನಾನು ಅವರಿಗೆ ಮೊದಲು ಒಂದೆರಡು ಬ್ಲಾಗು ತೋರಿಸಿದ್ದೆ. ಹಾಯಾಗಿ ಕಾಲುಚಾಚಿ ಓದಿನ ಸುಖ ಅನುಭವಿಸುತ್ತಿದ್ದವರಿಗೆ ಹೀಗೆ ಕುಳಿತು ಕಣ್ಣು ನಿರುಕಿಸಿ ಪರದೆ ನೋಡೋದು ಕಿರಿಕಿರಿ ಅನಿಸಿರಬೇಕು, ಈ ಮೇಲಿನಂತೆ ನನಗೆ ಮಂಗಳಾರತಿ ಮಾಡಿದ್ದರು!
ನಾಲ್ಕೇ ತಿಂಗಳು…
ಅವಧಿಯಲ್ಲಿ ಗಾಳಿಬೆಳಕು ನೋಡಿದ್ಯಾ?
ಮೈಸೂರು ಪೋಸ್ಟ್ ನಲ್ಲಿ ಹೊಸತು ಏನೂ ಬಂದಿಲ್ಲ ಯಾಕೆ?
ಭಾಮಿನಿ ಷಟ್ಪದಿ ಬ್ಲಾಗಾಗಿದೆ. ಆ ಹೆಸರಿನದೊಂದು ಕಾಲಮ್ಮೂ ಇದೆ ಅವಧಿಯಲ್ಲಿ…
ನೆಲದ ಮಾತು ಹೊಸತು.
ಪಡಖಾನೆಯ ಹುಡುಗಿ, ಸಂಕಲನ ಮಾಡಬಹುದು!
ಋಜುವಾತು ನಿಂತು ನಿಂತು ಬರುತ್ತೆ…
ಈ ಸಿಂಧು ಹುಡುಗಿ ಯಾರು?
ಜೋಗಿ ಮನೆಗಿಂತ ಓದು ಜನಮೇಜಯ ಇಷ್ಟ. ಅಲ್ಲಿ ಎಷ್ಟೊಂದು ಪುಸ್ತಕಗಳು!
ಬುಕ್ ಬಾಜಾರ್ ಒಳ್ಳೆ ಪ್ರಯತ್ನ…
ಜೀವ ದನಿಯ ಸದ್ದು ಅಡಗಿದಹಾಗೆ ಕಾಣತ್ತಲ್ಲ ಯಾಕೆ?
– ವಾರಕ್ಕೊಮ್ಮೆ ಕಾಲ್ ಮಾಡುವ ಅಜ್ಜ, ಈಗ ಮಾತಾಡುವುದು ಬರೀ ಇಂಥದ್ದನ್ನೇ!
ಅಷ್ಟೇ ಅಲ್ಲ, “ಕಂಪ್ಯೂಟರ್ರಲ್ಲಿ ಇಷ್ಟೊಂದು ವೆರೈಟಿ ಕನ್ನಡ ಬರಹಗಳು ಓದೋಕೆ ಸಿಗ್ತಿರೋದು ಒಳ್ಳೇದೇ.
ಪುಸ್ತಕ ಹಿಡಿಯೋ ಸಹನೆ ಇಲ್ಲದವರಿಗೆ ಇದು ಅರಾಮ. ಓದದೇ ಕಳೆದುಹೋಗುವ ಕನ್ನಡ, ಕಡೆಪಕ್ಷ ಬರೆದಾದರೂ ಉಳಿಯಲಿ!” ಅಂತ ರಾಜಿಗೆ ಇಳಿದಿದ್ದಾರೆ ನನ್ನಜ್ಜ.
ಆದರೂ, ಕೆಲವೊಂದು ತೀರಾ ಒಳ್ಳೆಯ ಲೇಖನಗಳನ್ನ ಓದಿದಾಗ,”ಇದು ಪೇಪರ್ರಲ್ಲಿ ಬಂದ್ರೆ ಎಷ್ಟು ಚೆನ್ನ!” ಅಂತ ಅವರು ಗೊಣಗೋದು ತಪ್ಪಿಲ್ಲ.
ಕೆಲವೊಮ್ಮೆ ನನಗೂ ಹಾಗನ್ನಿಸತ್ತೆ. ನಿಮಗೆ?